ಬರಲಿದ್ದಾನೆ ಮಾಸ್ಕ್ ಮ್ಯಾನ್; ಏ.16ಕ್ಕೆ ತೆರೆಗೆ ಬರಲು ಮೋಕ್ಷ ಸಿದ್ಧ

Mask Man
Published on

ಬೆಂಗಳೂರು: ಈಗಾಗಲೇ ‘ಸೂಪರ್​ವ್ಯಾನ್’ ಬಗ್ಗೆ ನೋಡಿದ್ದೀರಾ, ‘ಸ್ಪೈಡರ್-ಮ್ಯಾನ್’ ಚಿತ್ರವನ್ನು ನೋಡಿದ್ದೀರಾ, ಶಕ್ತಿಮಾನ್ ಸಹ ಒಂದು ಕಾಲದಲ್ಲಿ ಮೋಡಿ ಮಾಡಿದ್ದುಂಟು. ಇದೀಗ ಮಾಸ್ಕ್​ಮ್ಯಾನ್ ಸರದಿ! ಹಾಗಂತ ‘ಮಾಸ್ಕ್​ಮ್ಯಾನ್’ ಅನ್ನೋ ಸಿನಿಮಾ ಸಿದ್ಧವಾಯ್ತಾ ಎಂದುಕೊಳ್ಳಬೇಡಿ. ಬದಲಿಗೆ ‘ಮೋಕ್ಷ’ ಶೀರ್ಷಿಕೆಯ ಸಿನಿಮಾದಲ್ಲಿ ಮಾಸ್ಕ್ ಮ್ಯಾನ್ ಕಾಣಿಸಲಿದ್ದಾನೆ. ಹೊಸಬರೇ ಸೇರಿ ಮಾಡಿರುವ ‘ಮೋಕ್ಷ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆ ಆಗಿದೆ. ಹೊಸಬರ ಈ ಪ್ರಯತ್ನಕ್ಕೆ ಸ್ಯಾಂಡಲ್​ವುಡ್​ನ ಸಾಕಷ್ಟು ಕಲಾವಿದರು ಮೆಚ್ಚುಗೆ ಮಾತುಗಳನ್ನಾಡಿ ಬೆನ್ನು ತಟ್ಟಿದ್ದಾರೆ. ಎಲ್ಲ ಹಂತದಿಂದಲೂ ಸಿದ್ಧವಾಗಿರುವ ಈ ಚಿತ್ರ ಏ.16ಕ್ಕೆ ಚಿತ್ರ ಬಿಡುಗಡೆ ಆಗುತ್ತಿದೆ. ಈಗಾಗಲೇ ಹಿಂದಿಯ ಹಲವು ಸಿನಿಮಾಗಳಲ್ಲಿ ನಟಿಸಿರುವ ಮೋಹನ್ ಧನರಾಜ್, ‘ಮೋಕ್ಷ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಆರಾಧ್ಯಾ ಲಕ್ಷ್ಮಣ್ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ. ಪೊಲೀಸ್ ಆಗಿ ನಟ ತಾರಕ್ ಪೊನ್ನಪ್ಪ ವಿಶೇಷ ಪಾತ್ರವೊಂದನ್ನು ನಿಭಾಯಿಸಿದ್ದಾರೆ.

ಈ ಸಸ್ಪೆನ್ಸ್, ಥ್ರಿಲ್ಲರ್ ಶೈಲಿಯ ಚಿತ್ರಕ್ಕೆ ಸಮರ್ಥ್ ನಾಯಕ್ ನಿರ್ವಣದ ಜತೆಗೆ ನಿರ್ದೇಶನ ಮಾಡಿದ್ದು, ಚಿತ್ರದ ಬಗ್ಗೆ ಮಾತನಾಡಿದ್ದಾರೆ. ‘ಇಡೀ ಸಿನಿಮಾದಲ್ಲಿ ಮಾಸ್ಕ್​ಮ್ಯಾನ್ ಅನ್ನೋ ಪಾತ್ರವೊಂದಿದೆ. ಆ ಪಾತ್ರ ನಾಯಕ ಮತ್ತು ನಾಯಕಿಗೆ ತೊಂದರೆ ಕೊಡುತ್ತಾ ಹೋಗುತ್ತದೆ. ಈ ಪಾತ್ರಧಾರಿ ಯಾರು, ಯಾಕೆ ಆತ ಎಲ್ಲರನ್ನೂ ಕೊಲೆ ಮಾಡುತ್ತಿರುತ್ತಾನೆ ಎಂಬುದೇ ಕತೆ’ ಎನ್ನುತ್ತಾರವರು. ಗುರುಪ್ರಶಾಂತ್ ರೈ, ಕಿರಣ್ ಹಂಪಾಪುರ, ಜೋಮ್ ಜೋಸೆಫ್ ಕ್ಯಾಮೆರಾ ಹಿಡಿದಿದ್ದಾರೆ. ಜಯಂತ್ ಕಾಯ್ಕಿಣಿ, ಕುಮಾರ್ ದತ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಕಿಶನ್ ಮೋಹನ್, ಸಚಿನ್ ಬಾಲು ಸಂಗೀತ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net