

ಮುಂಬೈ: ಹಾಲಿವುಡ್ ಅಥವಾ ಬೇರೆ ದೇಶಗಳ ನಟರನ್ನು ಬಾಲಿವುಡ್ನತ್ತ ಸೆಳೆಯುವ ಪ್ರಯತ್ನ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಈ ಹಿಂದೆ 'ದಿಲ್ವಾಲೇ ದುಲ್ಹನಿಯಾ ಲೇ ಜಾಯೇಂಗೆ' ಚಿತ್ರದಲ್ಲಿ ನಟಿಸುವುದಕ್ಕೆ ಹಾಲಿವುಡ್ ನಟ ಕಿಯೆನು ರೀವ್ಸ್ ಅವರಿಗೆ ಆಫರ್ ನೀಡಲಾಗಿತ್ತಂತೆ. ಯಾವಾಗ ರೀವ್ಸ್ ನೋ ಎಂದರೋ, ಆಗ ಶಾರೂಖ್ ಖಾನ್ ಅವರನ್ನು ಆ ಪಾತ್ರ ನೀಡಲಾಯಿತಂತೆ.
ಈಗ್ಯಾಕೆ ಈ ವಿಷಯವೆಂದರೆ, ಇದೀಗ ಮತ್ತೊಬ್ಬ ವಿದೇಶಿ ನಟನನ್ನು ಬಾಲಿವುಡ್ಗೆ ಕರೆತರುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಕರಣ್ ಜೋಹರ್. ಕಳೆದ ವರ್ಷ ಬಿಡುಗಡೆಯಾದ ರೊಮ್ಯಾಂಟಿಕ್ ಚಿತ್ರ '365 ಡೇಸ್'ನಲ್ಲಿ ನಟಿಸಿದ್ದ ಮಿಚೆಲ್ ಮೊರ್ರೋನ್ ಅವರನ್ನು ಕರಣ್ ಸಂಪರ್ಕ ಮಾಡಿದ್ದು, ತಮ್ಮ ನಿರ್ಮಾಣದ ಹೊಸ ಚಿತ್ರದಲ್ಲಿ ನಟಿಸುವಂತೆ ಆಫರ್ ಕೊಟ್ಟಿದ್ದಾರಂತೆ.
'365 ಡೇಸ್' ಚಿತ್ರ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದ ನಂತರ ಮಿಚೆಲ್ಗೆ ಜಗತ್ತಿನಾದ್ಯಂತ ಅಭಿಮಾನಿಗಳು ಹೆಚ್ಚಾಗಿದ್ದು, ಅದರಲ್ಲೂ ಭಾರತದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರಂತೆ. ಮಿಚೆಲ್ ಅವರ ಜನಪ್ರಿಯತೆಯನ್ನು ಎನ್ಕ್ಯಾಶ್ ಮಾಡಿಕೊಳ್ಳುವುದು ಕರಣ್ ಅವರ ಐಡಿಯಾ. ಅದೇ ಕಾರಣಕ್ಕೆ, ತಮ್ಮ ನಿರ್ಮಾಣದ ಹೊಸ ಚಿತ್ರವೊಂದರಲ್ಲಿ ಅವರಿಗೆ ಆಫರ್ ನೀಡಿದ್ದಾರೆ ಎಂದು ಹೇಳಲಾಗಿದೆ.
ಬರೀ ಕರಣ್ ಮಾತ್ರವಲ್ಲ, ಬಾಲಿವುಡ್ನ ಇನ್ನೂ ಕೆಲವು ಜನಪ್ರಿಯ ನಿರ್ಮಾಪಕ-ನಿರ್ದೇಶಕರು, ಮಿಚೆಲ್ ಹಿಂದೆ ಬಿದ್ದಿದ್ದಾರಂತೆ. ಆದರೆ, ಸದ್ಯಕ್ಕೆ ಆತ ಯಾರಿಗೂ ಗ್ರೀನ್ ಸಿಗ್ನಲ್ ನೀಡಿಲ್ಲ. ನಿಜಕ್ಕೂ ಮಿಚೆಲ್, ಭಾರತೀಯ ಚಿತ್ರಗಳಲ್ಲಿ ನಟಿಸುತ್ತಾರಾ ಎಂಬುದು ಕಾದು ನೋಡಬೇಕಿದೆ.