ಮೂರು ಭಾಷೆಗಳಲ್ಲಿ ಬರಲಿದೆ 'ಮೇರಾ ನಾಮ್ ಪೂರಿಭಾಯ್'

D8H_8276
Published on

ಬೆಂಗಳೂರು: ಕನ್ನಡದಲ್ಲಿ ಇದುವರೆಗೂ ಮೂರು ಚಿತ್ರಗಳನ್ನು ನಿರ್ಮಿಸಿ-ನಿರ್ದೇಶನ ಮಾಡಿರುವ ತುಮಕೂರಿನ ಪಿ.ಚಿರಂಜೀವಿ ನಾಯ್ಕ್ ಸದ್ದಿಲ್ಲದೆ ಹೊಸ ಚಿತ್ರವೊಂದನ್ನು ಪ್ರಾರಂಭಿಸಿದ್ದಾರೆ. ಅದೇ ’ಮೇರಾ ನಾಮ್ ಪೂರಿಭಾಯ್’. ಈ ಚಿತ್ರದ ಮುಹೂರ್ತವು ಇತ್ತೀಚೆಗೆ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಮುಗಿದಿದೆ.

ಕನ್ನಡ ಚಿತ್ರಕ್ಕೆ ಹಿಂದಿ ಹೆಸರು ಯಾಕೆ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು, ಈ ಕುರಿತು ಮಾತನಾಡುವ ನಿರ್ದೇಶಕರು, ಕನ್ನಡ, ತೆಲುಗು ಮತ್ತು ಹಿಂದಿಯಲ್ಲಿ ಬರುತ್ತಿರುವ ಕಾರಣ ಎಲ್ಲಾ ಭಾಷೆಗೆ ಹೊಂದಿಕೆಯಾಗುವಂತೆ ಇದೇ ಶೀರ್ಷಿಕೆಯನ್ನು ಇಡಲಾಗಿದೆ ಎನ್ನುತ್ತಾರೆ. 'ಕಥೆಯು ಮುಂಬೈನಲ್ಲಿ ಪ್ರಾರಂಭವಾಗಿ ನಂತರ ಕನಾರ್ಟಕದಲ್ಲಿ ಮುಂದುವರೆಯುತ್ತದೆ. ಬೇರೆ ಸಿನಿಮಾಗಳಲ್ಲಿ ಇಲ್ಲಿಂದ ಅಲ್ಲಿಗೆ ಹೋಗಿ ಡಾನ್ ಆಗುತ್ತಾರೆ. ಆದರೆ, ನಮ್ಮ ಸಿನಿಮಾದಲ್ಲಿ ಮುಂಬೈನಿಂದ ಬಂದ ಹುಡುಗನೊಬ್ಬ ಕರ್ನಾಟಕದಲ್ಲಿ ರೌಡಿಯಾಗುತ್ತಾನೆ ಎನ್ನುವುದು ವಿಶೇಷ' ಎನ್ನುತ್ತಾರೆ ಚಿರಂಜೀವಿ ನಾಯ್ಕ್​​.

ಚಿತ್ರದ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲುವ ಅವು, 'ಮುಗ್ಧನಾಗಿರುವ ಹೀರೋ ಇಲ್ಲಿಗೆ ಬಂದ ಮೇಲೆ ರಗಡ್ ಆಗುತ್ತಾನೆ. ಬೆಂಗಳೂರಿಗೆ ಬಂದು ಏನು ಮಾಡ್ತಾನೆ, ಹೇಗೆ ಬದಲಾಗುತ್ತಾನೆ ಎಂಬುದನ್ನು ಹೇಳಲಾಗುತ್ತಿದೆ. ಒಟ್ಟಾರೆ ಮಾಸ್ ಕಮರ್ಷಿಯಲ್ ಸ್ಟೋರಿ ಇದಾಗಿದೆ. ಕಥೆಯು ಕರ್ನಾಟಕವಲ್ಲದೆ ಮುಂಬೈನಲ್ಲೂ ನಡೆಯುವುದರಿಂದ, ಒಂದಿಷ್ಟು ಸಂಭಾಷಣೆಗಳು ಹಿಂದಿಯಲ್ಲಿ ಇರುತ್ತವೆ. ಮಡಕೇರಿ, ಚಿಕ್ಕಮಗಳೂರು, ಹೆಚ್.ಡಿ.ಕೋಟೆ, ಹಿಮಾಲಯದಲ್ಲಿ ಚಿತ್ರೀಕರಣವನ್ನು ಎರಡು ಹಂತದಲ್ಲಿ ನಡೆಸಲು ಯೋಜನೆ ಹಾಕಲಾಗಿದೆ' ಎನ್ನುತ್ತಾರೆ.

ಈ ಚಿತ್ರದಲ್ಲಿ ಕಿಶೋರ್​ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ’ಐ1’ ಎಂಬ ಚಿತ್ರದಲ್ಲಿ ನಟಿಸಿರುವ ಅವರಿಗೆ ಇದು ಎರಡನೇ ಅವಕಾಶ. ಇದೇ ಎರಡನೇ ಅವಕಾಶ. ಬೆಳಗಾಂನ ವಿದ್ಯಾನಾಗಪ್ಪ ಪಾಟೀಲ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮಿಕ್ಕಂತೆ ಎಂ.ಎಸ್.ಉಮೇಶ್, ರಮೇಶ್‌ ಪಂಡಿತ್, ಪವಿತ್ರಾ ಲೋಕೇಶ್, ರಮೇಶ್‌ ಭಟ್ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ಎ.ಟಿ.ರವೀಶ್ ಸಂಗೀತ ಸಂಯೋಜಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net