ಚಿತ್ರರಂಗಕ್ಕೆ ಶಶಿಕುಮಾರ್ ಮಗ; ಅಕ್ಷಿತ್ ಅಭಿನಯದ ಸೀತಾಯಣ ಇಂದು ಬಿಡುಗಡೆ

Shashi Son
Published on

ಶಶಿಕುಮಾರ್ ಅವರ ಮಗ ಅಕ್ಷಿತ್ ಬಣ್ಣ ಹಚ್ಚಿದ ಸುದ್ದಿ ಹಳೆಯದಾಯಿತು. ಈಗಾಗಲೇ ಅಕ್ಷಿತ್ ಬಣ್ಣ ಹಚ್ಚಿ ಎರಡು ವರ್ಷಗಳಾಗಿವೆ. ಮೊದಲ ಚಿತ್ರ ಬಿಡುಗಡೆಯಾಗುವುದಕ್ಕೆ ಮುನ್ನ ಇನ್ನೆರಡು ಚಿತ್ರಗಳಲ್ಲಿ ನಟಿಸಿದ್ದೂ ಆಗಿದೆ. ಈಗ ಮೊದಲ ಚಿತ್ರ ‘ಸೀತಾಯಣ’ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

‘ಸೀತಾಯಣ’ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ಚಿತ್ರ. ಈ ಚಿತ್ರದ ಕುರಿತು ಮಾತನಾಡುವ ಅಕ್ಷಿತ್, ‘ನನ್ನ ಮೊದಲ ಚಿತ್ರಕ್ಕೆ ಪುನೀತ್ ಹಾಡಿದ್ದಾರೆ. ಶಿವಣ್ಣ ಪೋಸ್ಟರ್ ಬಿಡುಗಡೆ ಮಾಡಿದರೆ, ಉಪೇಂದ್ರ ಹಾಡು ಬಿಡುಗಡೆ ಮಾಡಿದ್ದಾರೆ. ಇದೊಂದು ಪ್ರೀತಿಯ ಕಥೆ. ಸಾಕಷ್ಟು ಥ್ರಿಲ್ಲಿಂಗ್ ಅಂಶಗಳು ಈ ಚಿತ್ರದಲ್ಲಿವೆ. ರಾಮಾಯಣದಲ್ಲಿ ನಾಯಕ, ನಾಯಕಿ, ಖಳನಾಯಕ ಇದ್ದಂತೆ ಇಲ್ಲೂ ಅವರೆಲ್ಲರೂ ಇದ್ದಾರೆ. ಅದಕ್ಕಾಗಿ ‘ಸೀತಾಯಣ’ ಎಂಬ ಹೆಸರನ್ನು ಇಡಲಾಗಿದೆ. ಮೊದಲು ಇಲ್ಲಿ ಬಿಡುಗಡೆಯಾಗಿ, ನಂತರ ತೆಲುಗಿನಲ್ಲಿ ಬಿಡುಗಡೆಯಾಗಲಿದೆ’ ಎನ್ನುತ್ತಾರೆ. ಚಿತ್ರದಲ್ಲಿ ಅಕ್ಷಿತ್​ಗೆ ನಾಯಕಿಯಾಗಿ ಅನಹಿತಾ ಭೂಷಣ್ ಅಭಿನಯಿಸಿದ್ದಾರೆ.

ಒಟ್ಟು 9 ಚಿತ್ರಗಳು: ‘ಸೀತಾಯಣ’ ಚಿತ್ರವೂ ಸೇರಿದಂತೆ ಈ ವಾರ ಒಟ್ಟು ಒಂಬತ್ತು ಚಿತ್ರಗಳು ಬಿಡುಗಡೆಯಾಗುತ್ತಿವೆ. ‘ಕಿರಿಕ್ ಶಂಕರ್, ‘ಕಾಣೆಯಾದವರ ಬಗ್ಗೆ ಪ್ರಕಟಣೆ’, ‘ವ್ಹೀಲ್​ಚೇರ್ ರೋಮಿಯೋ’, ‘ಫಿಸಿಕ್ಸ್ ಟೀಚರ್’, ‘ಅಂಜನ್’, ‘ಪ್ರೀತ್ಸು’, ‘ಧೀರನ್’ ಮತ್ತು ‘ಚೆಲ್ಲಗುರ್ಗಿ ಶ್ರೀ ಎರ್ರಿತಾತಯ್ಯ ಮಹಿಮೆ’ ಈ ವಾರ ಬಿಡುಗಡೆಯಾಗುತ್ತಿರುವ ಇತರೆ ಚಿತ್ರಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net