'ಮೇಲೊಬ್ಬ ಮಾಯಾವಿ' ಟ್ರೇಲರ್ ಬಿಡುಗಡೆ ... ಚಿತ್ರ ಏ. 29ಕ್ಕೆ

Melobba Mayavi 5
Published on

ಬೆಂಗಳೂರು: ಸಂಚಾರಿ ವಿಜಯ್ ನಿಧನದ ನಂತರ 'ಪುಕ್ಸಟ್ಟೆ ಲೈಫು' ಮತ್ತು 'ತಲೆ ದಂಡ' ಚಿತ್ರಗಳು ಬಿಡುಗಡೆಯಾಗಿವೆ. ಈಗ ಅವರ ಕೊನೆಯ ಚಿತ್ರ 'ಮೇಲೊಬ್ಬ ಮಾಯಾವಿ' ಇದೇ ತಿಂಗಳ 29ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಅದಕ್ಕೂ ಮುನ್ನ ಇತ್ತೀಚೆಗೆ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ.

'ಮೇಲೊಬ್ಬ ಮಾಯಾವಿ' ಟ್ರೇಲರ್​ ಬಿಡುಗಡೆ ಮಾಡಿದವರು ಶ್ರೀನಗರ ಕಿಟ್ಟಿ. ಅವರೊಂದಿಗೆ ಚಕ್ರವರ್ತಿ ಚಂದ್ರಚೂಡ್​, ಕೃಷ್ಣಮೂರ್ತಿ ಕವತ್ತಾರ್​ ಮುಂತಾದವರು ಹಾಜರಿದ್ದರು. ಎಲ್ಲರ ಸಮ್ಮುಖದಲ್ಲಿ ಚಿತ್ರದ ಟ್ರೇಲರ್​ ಬಿಡುಗಡೆಯಾಯಿತು.

ಖ್ಯಾತ ಸಾಹಿತಿ ಚಿ.ಉದಯ್ ಶಂಕರ್ ಅವರ 'ದೇವನೊಬ್ಬನಿರುವ' ಹಾಡಿನ ಸಾಲಿನೊಂದಿಗೆ ಮಾತು ಆರಂಭಿಸಿದ ಶ್ರೀನಗರ ಕಿಟ್ಟಿ , ಹರಳು ದಂಧೆಯಂತಹ ವಿಷಯವನ್ನು ತೆರೆಗೆ ತರಲು ಧೈರ್ಯ ಮಾಡಿರುವ ಚಿತ್ರತಂಡದವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. 'ನನ್ನ ಗುರುಗಳಾದ ಕವತ್ತಾರ್ ಅವರನ್ನು ಕಂಡು ತುಂಬಾ ಸಂತೋಷವಾಗಿದೆ. ಬಹುಕಾಲದ ಗೆಳೆಯ ಚಕ್ರವರ್ತಿ ಚಂದ್ರಚೂಡ್ ಈ ಚಿತ್ರದಲ್ಲಿ ತೊಡಗಿಕೊಂಡಿರುವುದು ಮತ್ತಷ್ಟು ಖುಷಿಯಾಗಿದೆ' ಎಂದು ಕಿಟ್ಟಿ ಹೇಳಿದರು.

ಈ ಚಿತ್ರವನ್ನು ನಿರ್ದೇಶಿಸಿದವರು ನವೀನ್​ ಕೃಷ್ಣ. ಚಿತ್ರದ ಬಗ್ಗೆ ಮಾತನಾಡಿದವ ಅವರು, 'ನಾನು ಕೂಡ ಪತ್ರಕರ್ತನಾಗಿ ಹಲವು ಚಿತ್ರಗಳ ವಿಮರ್ಶೆ ಮಾಡಿದ್ದೀನಿ. ಆದರೆ ಅದೇ ಬೇರೆ. ನಿರ್ದೇಶನ ಮಾಡುವುದೇ ಬೇರೆ. ನಿರ್ದೇಶನ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ. ಇನ್ನೂ ಈ ಚಿತ್ರದ ಬಗ್ಗೆ ಹೇಳುವುದಾದರೆ, ಪಶ್ಚಿಮ ಘಟ್ಟಗಳಲ್ಲಿ ನಡೆಯುವ ಹರಳು ಮಾಫಿಯಾದ ಕುರಿತಾದ ಸಿನಿಮಾ ಸಾಗುತ್ತದೆ. ಇದರಲ್ಲಿ ಮೂರು ಪ್ರಮುಖ ಪಾತ್ರಗಳು ಸಕ್ಕರೆ,‌ ಇರುವೆ ಹಾಗೂ ಸುಲೇಮಾನ್. ಸಕ್ಕರೆ ಪಾತ್ರದಲ್ಲಿ ಅನನ್ಯ ಶೆಟ್ಟಿ, ಇರುವೆಯ ಪಾತ್ರದಲ್ಲಿ ಸಂಚಾರಿ ವಿಜಯ್ ಹಾಗೂ ಸುಲೇಮಾನ್ ಪತ್ರದಲ್ಲಿ ಚಕ್ರವರ್ತಿ ಚಂದ್ರಚೂಡ್ ಅಭಿನಯಿಸಿದ್ದಾರೆ. ಮೂವರೂ ತಮ್ಮ ಕೆಲಸವನ್ನು ಬಹಳ ಚೆನ್ನಾಗಿ ಮಾಡಿದ್ದಾರೆ' ಎಂದರು.

'ಮೇಲೊಬ್ಬ ಮಾಯಾವಿ' ಚಿತ್ರವನ್ನು ಶ್ರೀ ಕಟೀಲ್ ಸಿನಿಮಾಸ್ ಅಡಿಯಲ್ಲಿ ಭರತ್ ಕುಮಾರ್ ಮತ್ತು ತನ್ವಿ ಅಮಿನ್ ಕೊಲ್ಯ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ದಿವಂಗತ ಎಲ್.ಎನ್.ಶಾಸ್ತ್ರೀಯವರ ಸಂಗೀತವಿದ್ದು, ಹಿನ್ನಲೆ ಸಂಗೀತ ಮಣಿಕಾಂತ್ ಕದ್ರಿ ನೀಡಿದ್ದಾರೆ.

ಚಿತ್ರದಲ್ಲಿ ಸಂಚಾರಿ ವಿಜಯ್, ಅನನ್ಯ ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್, ಕೃಷ್ಣಮೂರ್ತಿ ಕವತ್ತಾರ್, ಬೆನಕ ನಂಜಪ್ಪ, ಎಮ್.ಕೆ.ಮಠ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net