

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ಎಂದೇ ಚಂದನವನದಲ್ಲಿ ಖ್ಯಾತಿಯಾಗಿದ್ದ ಅಭಿಮಾನಿಗಳ ನೆಚ್ಚಿನ ದಚ್ಚು ಅಲಿಯಾಸ್ ದರ್ಶನ್ ಇಂದು ಅಭಿಮಾನಿಗಳು ತಲೆ ತಗ್ಗಿಸುವಂತಹ ಕೆಲಸ ಮಾಡಿದ್ದಾರೆ. ಮದುವೆಯಾಗಿದ್ದರು ಕೂಡ ಮತ್ತೊಬ್ಬಳ ಸಹವಾಸ ಮಾಡಿ, ಆಕೆಗಾಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ದರ್ಶನ್, ಇದೀಗ ಖಳನಾಯಕನ ಸ್ಥಾನದಲ್ಲಿ ನಿಂತಿದ್ದಾರೆ. ಚಿತ್ರರಂಗದಲ್ಲಿ ಒಳ್ಳೆಯತನದ ಬಗ್ಗೆ ಉದ್ದುದ್ದ ಡೈಲಾಗ್ ಹೊಡೆಯುತ್ತಿದ್ದ ಚಕ್ರವರ್ತಿ ಇಂದು ಮಾಡಬಾರದ ಕೆಲಸ ಮಾಡಿ ಜನಗಳಿಗೆ ಮುಖ ತೋರಿಸಲಾಗದ ಸ್ಥಿತಿಯಲ್ಲಿದ್ದಾರೆ. ಹಣ, ಖ್ಯಾತಿ ಹಾಗೂ ಅಭಿಮಾನಿಗಳ ಅಭಿಮಾನದ ಅಹಂ ಅನ್ನು ನೆತ್ತಿಗೇರಿಸಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ದರ್ಶನ್ ಅವರು ಜ್ವಲಂತ ಸಾಕ್ಷಿಯಾಗಿ ನಿಂತಿದ್ದಾರೆ. ಮಾತೆತ್ತಿದ್ದರೆ ಅಶ್ಲೀಲ ಬೈಗುಳಗಳು, ಎಲ್ಲಿ ಹೇಗೆ ಮಾತನಾಡಬೇಕು ಎಂಬ ಅರಿವು ಇಲ್ಲದಿರುವುದು, ಎಷ್ಟೋ ಬಾರಿ ತಪ್ಪು ಮಾಡಿದಾಗಲೂ ತಿದ್ದುಕೊಳ್ಳದೇ ಇರುವುದು ಇಂದು ದರ್ಶನ್ರನ್ನು ಇಂತಹ ಹೀನಾಯ ಸ್ಥಿತಿಗೆ ದೂಡಿದೆ.
ಅಂದಹಾಗೆ ದರ್ಶನ್ ಅವರ ಆಟಾಟೋಪಗಳು ಇದೇ ಮೊದಲೇನಲ್ಲ. ಒಂದು ಕಾಲದಲ್ಲಿ ಪತ್ನಿಯ ಜತೆಗಿನ ಗುದ್ದಾಟದಿಂದ ಜೈಲು ಪಾಲಾಗಿ, ಆತನ ಸಿನಿ ಕೆರಿಯರ್ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಸಾರಥಿ ಸಿನಿಮಾ ಮೂಲಕ ದರ್ಶನ್ ಅವರಿಗೆ ಮತ್ತೊಂದು ಅವಕಾಶ ಸಿಕ್ಕಿತ್ತು. ಆದರೆ, ಅದರಿಂದಲೂ ಪಾಠ ಕಲಿಯದ ಸ್ಟಾರ್ ನಟ ಇಂದು ನಿಜ ಜೀವನದಲ್ಲಿ ಕುಖ್ಯಾತ ಖಳನಟನಾಗಿ ತಲೆತಗ್ಗಿಸಿ ನಿಂತಿದ್ದಾರೆ. ತಮ್ಮ ಜೀವನದಲ್ಲಿ ದರ್ಶನ್ ಸುತ್ತಲೂ ಕೇಳಿಬಂದ ಅನೇಕ ವಿವಾದಗಳ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಪತ್ನಿಯಿಂದಲೇ ದರ್ಶನ್ ಮತ್ತೊಂದು ಮುಖದ ಪರಿಚಯ
ಈ ಹಿಂದೆ ದರ್ಶನ್ ಹೆಸರು ನಟಿ ನಿಖಿತಾ ಜತೆ ಕೇಳಿಬಂದಿತ್ತು. ನಿಖಿತಾ ಚಿತ್ರರಂಗದಿಂದ ಬ್ಯಾನ್ ಆಗಲು ದರ್ಶನ್ ಕಾರಣ ಎಂಬ ಆರೋಪವೂ ಇದೆ. ಇದರ ಮುಂದುವರಿದ ಭಾಗವಾಗಿ 2011ರ ಸೆಪ್ಟೆಂಬರ್ ತಿಂಗಳಲ್ಲಿ ದರ್ಶನ್ ಅವರ ಕೌಟುಂಬಿಕ ಕಲಹ ರಾಜ್ಯದಲ್ಲೇ ದೊಡ್ಡದಾಗಿ ಚರ್ಚೆಯಾಗಿತ್ತು. ಪತ್ನಿ ವಿಜಯಲಕ್ಷ್ಮೀ ಮೇಲೆ ದರ್ಶನ್ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಇಷ್ಟೇ ಅಲ್ಲದೆ, ಸಿಗರೇಟ್ನಿಂದ ಸುಟ್ಟಿರುವ ಆರೋಪವೂ ಕೇಳಿಬಂದಿತ್ತು. ಇದೇ ವಿಚಾರಕ್ಕೆ ದರ್ಶನ್ ವಿರುದ್ಧ ವಿಜಯಲಕ್ಷ್ಮೀ ದೂರು ನೀಡಿದ್ದರು. ಬಳಿಕ ದರ್ಶನ್ ಬಂಧನ ಸಹ ನಡೆದಿತ್ತು. ದರ್ಶನ್ ಅವರು ಸುಮಾರು 28 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದರು. ರಾಜಿಸಂಧಾನ ಮಾಡಿದ ಬಳಿಕ ವಿಜಯಲಕ್ಷ್ಮೀ ಕೇಸ್ ವಾಪಸ್ ಪಡೆದುಕೊಂಡಿದ್ದರು ಮತ್ತು ವಿವಾದ ಸುಖಾಂತ್ಯ ಕಂಡಿತು. ಈ ಸಮಯದಲ್ಲೂ ಅಭಿಮಾನಿಗಳು ದರ್ಶನ್ಗೆ ಬೆಂಬಲವಾಗಿ ನಿಂತಿದ್ದರು. ದರ್ಶನ್ ಕೆರಿಯರ್ ಮುಗಿಯಿತು ಎನ್ನುವಷ್ಟರಲ್ಲಿ ಸಾರಥಿ ಸಿನಿಮಾ ದರ್ಶನ್ ಅವರಿಗೆ ಮತ್ತೊಂದು ಅವಕಾಶವನ್ನು ನೀಡಿತು. ಏಕೆಂದರೆ, ಈ ಸಿನಿಮಾ ಆ ಸಮಯದಲ್ಲಿ ಸೂಪರ್ ಡೂಪರ್ ಹಿಟ್ ಆಗಿತ್ತು.
ಹೊಟೇಲ್ನಲ್ಲಿ ದರ್ಶನ್ ರಾದ್ಧಾಂತ
2021 ಜುಲೈ ತಿಂಗಳಲ್ಲಿ ಮೈಸೂರಿನ ಸಂದೇಶ ಪ್ರಿನ್ಸ್ ಹೊಟೇಲ್ನಲ್ಲಿ ನಡೆದ ರಾದ್ಧಾಂತವನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಿಚ್ಚಿಟ್ಟ ಬಳಿಕ ಈ ಪ್ರಕರಣ ಬಹಳ ಚರ್ಚೆಯಾಗಿತ್ತು. ನಟ ದರ್ಶನ್ ಹಾಗೂ ಸ್ನೇಹಿತರು ಸಂದೇಶ್ ಪ್ರಿನ್ಸ್ ಹೋಟೆಲ್ನಲ್ಲಿ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಿರ್ದೇಶಕ ಇಂದ್ರಜಿತ್ ಲಂಕೇಶ್, ಅಂದಿನ ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದರು. ಫುಡ್ ಸಪ್ಲೈ ಮಾಡುವುದು ಸ್ವಲ್ಪ ತಡವಾಯ್ತು. ಹಾಗಾಗಿ ದರ್ಶನ್ ಅವರು ಕೋಪಗೊಂಡು ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದರು ಎಂಬ ಸಂಗತಿ ಭಾರಿ ವಿವಾದಕ್ಕೆ ಗುರಿಯಾಗಿತ್ತು.
ನಿರ್ಮಾಪಕ ಉಮಾಪತಿ ಜತೆ 2 ಬಾರಿ ತಿಕ್ಕಾಟ
2021ರಲ್ಲಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ದರ್ಶನ್ ಮತ್ತು ಉಮಾಪತಿ ನಡುವೆ ವೈಮನಸ್ಸು ಮೂಡಿತ್ತು. ಜೂನ್ 14ರಂದು ನಾನು ಬೆಂಗಳೂರಿಗೆ ತೆರಳಿದೆ. ಬೆಂಗಳೂರಿಗೆ ಬಂದಿದ್ದೀರಾ ಎಂದು ಕೇಳಲು ಉಮಾಪತಿ ಅವರು ಫೋನ್ ಮಾಡಿದ್ದರು. ಜೂನ್ 16ರಂದು ಅರುಣಾ ಕುಮಾರಿ ಎಂಬಾಕೆ ನಮ್ಮ ಮನೆಗೆ ಬಂದರು. ಎಲ್ಲರ ಹೆಸರನ್ನು ಸರಿಯಾಗಿಯೇ ಹೇಳಿದರು. ಅಲ್ಲದೆ, ನನ್ನ ಆಧಾರ್ ಕಾರ್ಡ್ ನಂಬರ್ ಸಹ ಹೇಳಿದರು. ಪೋರ್ಜರಿ ಸಹಿ ಕೂಡ ತೋರಿಸಿದರು. ನನಗೆ ಶಾಕ್ ಆಯಿತು. ಎಲ್ಲಿ ತಪ್ಪಾಗುತ್ತದೆ ಎಂದು ಗೊತ್ತಾಗಲಿಲ್ಲ. ಇದಾದ ಬಳಿಕ ಮೈಸೂರಿಗೆ ಬಂದ ಆರೋಪಿ ಅರುಣಾ ಕುಮಾರಿ ಅವರನ್ನು ಸ್ನೇಹಿತರೊಂದಿಗೆ ನಮ್ಮ ತೋಟದ ಮನೆಯಲ್ಲಿ ಭೇಟಿ ಮಾಡಿಸಿದೆ. ಅವರ್ಯಾರು ಲೋನ್ಗೆ ಅರ್ಜಿ ಸಲ್ಲಿಸಿಲ್ಲ ಎಂದರು. ಆದರೆ. ಅರುಣಾ ಕುಮಾರಿ ಮಾತ್ರ ಸಲ್ಲಿಸಿದ್ದಾರೆ ಎಂದು ತಮ್ಮ ಮಾತಿಗೆ ಬದ್ಧವಾಗಿದ್ದರು. ಬ್ಯಾಂಕ್ ಮ್ಯಾನೇಜರ್ ಅಂತಾ ಹೇಳ್ತೀರಾ ಐಡಿ ಕಾರ್ಡ್ ಕೊಡಿ ಎಂದಿದ್ದಕ್ಕೆ ಮನೆಯಲ್ಲಿದ್ದೇ ತರಲು ಮರೆತುಬಿಟ್ಟೆ ಅಂದರು. ಕೊನೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಅಲ್ಲ ಎಂದು ಗೊತ್ತಾದ ಬಳಿಕ ನಿರ್ಮಾಪಕ ಉಮಾಪತಿ ಅವರೇ ನನ್ ಕಳುಹಿಸಿದರು ಎಂದು ಅರುಣಾ ಕುಮಾರಿ ಹೇಳಿದರು. ಆದರೆ, ಫೋನ್ ಮಾಡಿದ ದಿನದಿಂದಲೇ ನನಗೆ ಅವರ ಪರಿಚಯ ಆಗಿದೆ ಎಂದು ಉಮಾಪತಿ ಹೇಳಿದ್ದಾರೆ. ಪ್ರಕರಣದ ಬಗ್ಗೆ ನಮಗೂ ಗೊಂದಲವಿದೆ. ಸಮಗ್ರ ಪೊಲೀಸ್ ತನಿಖೆಯಿಂದ ಮಾತ್ರ ಎಲ್ಲವು ತಿಳಿದುಬರಲಿದೆ. ಇದರ ಹಿಂದೆ ಯಾರದ್ದೋ ಕೈವಾಡ ಇರುವ ಶಂಕೆ ಇದೆ. ಯಾರೇ ಇರಲಿ ಗೊತ್ತಾದರೆ ಮಾತ್ರ ಸುಮ್ಮನೇ ಬಿಡುವ ವ್ಯಕ್ತಿ ನಾನಲ್ಲ ಎಂದು ದರ್ಶನ್ ಹೇಳಿದ್ದರು. ಇದರ ನಡುವೆ ದರ್ಶನ್ ಅವರು ಅರುಣಾ ಕುಮಾರಿ ಮತ್ತು ಉಮಾಪತಿ ನಡುವೆ ನಡೆದಿರುವ ವಾಟ್ಸ್ಆ್ಯಪ್ ಚಾಟಿಂಗ್ ಸ್ಕ್ರೀನ್ಶಾಟ್ ಕಾಪಿಯನ್ನು ಸಹ ದರ್ಶನ್ ತೋರಿಸಿದ್ದರು. ಈ ಪ್ರಕರಣ ಕೆಲವು ದಿನಗಳವರೆಗೆ ಬಹಳ ಚರ್ಚೆಯಾಯಿತು.
ಇನ್ನು ಕಾಟೇರ ಸಿನಿಮಾ ವಿಚಾರದಲ್ಲೂ ಉಮಾಪತಿ ಮತ್ತು ದರ್ಶನ್ ನಡುವೆ ಕಿತ್ತಾಟವಾಯಿತು. ಕಾಟೇರ ಕತೆ ಬರೆಸಿದ್ದು ಮತ್ತು ಟೈಟಲ್ ಇಟ್ಟಿದ್ದು ನಾನೇ ಎಂದು ಉಮಾಪತಿ ಹೇಳಿದ್ದರು. ಬಳಿಕ ಉಮಾಪತಿಗೆ ಟಾಂಗ್ ಕೊಡಲು ಹೋಗಿ ದರ್ಶನ್ ತಗಡು, ಗುಮ್ಮುಸ್ಕೋತಿಯಾ ಎಂದಿದ್ದರು. ಇದು ಕೂಡ ಬಹಳ ದೊಡ್ಡ ಮಟ್ಟದಲ್ಲಿ ವಿವಾದ ಆಗಿತ್ತು.
ಪ್ರೇಮ್ಗೆ ಪುಡುಂಗಾ ಎಂದಿದ್ದರು
ಹೋಟೆಲ್ನಲ್ಲಿ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ಬ್ಯಾಂಕ್ ವಂಚನೆ ಸಂಬಂಧ ಇಂದ್ರಜಿತ್ ಲಂಕೇಶ್ ಮತ್ತು ಉಮಾಪತಿ ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ ನಿರ್ದೇಶಕ ಪ್ರೇಮ್ ಹೆಸರು ಉಲ್ಲೇಖಿಸಿ ದರ್ಶನ್ ಬೈಯ್ದಿದ್ದರು. ಉಮಾಪತಿ ಅವರನ್ನು ಪರಿಚಯ ಮಾಡಿದ್ದು ಪ್ರೇಮ್. ಯಾವುದೇ ನಿರ್ಮಾಪಕರಿಗೆ ನಾನು 70 ದಿನ ಕಾಲ್ಶೀಟ್ ಕೊಡ್ತೇನೆ ಅಷ್ಟೇ ಎಂದು ಹೇಳಿದ್ದೆ. ಆದರೆ ಮರುದಿನ ಪ್ರೇಮ್ಗೋಸ್ಕರ ನಿರ್ಧಾರ ಬದಲಿಸಿದ ದರ್ಶನ್. 100 ದಿನ ಕಾಲ್ಶೀಟ್ ಕೊಟ್ಟರು ಅಂತ ನ್ಯೂಸ್ ಬಂತು. ಉಮಾಪತಿ ಹಾಗೂ ಪ್ರೇಮ್ ಇಬ್ಬರನ್ನು ಕರೆದು ಕೇಳಿದೆ. ಇಬ್ಬರು ನಾನು ಹೇಳಿಲ್ಲ ಅಂದ್ರು. ನಾನು ಈ ಚಿತ್ರ ಮಾಡಲ್ಲ ಅಂದೆ. ಪ್ರೇಮ್ ಏನ್ ದೊಡ್ಡ ಪುಡುಂಗಾ, ಕೊಂಬೈತಾ ಎನ್ನುವ ಮೂಲಕ ದರ್ಶನ್ ವಿವಾದ ಹುಟ್ಟು ಹಾಕಿದ್ದರು.
ಅದೃಷ್ಟ ಲಕ್ಷ್ಮಿ ಬೆತ್ತಲೆ
ಕ್ರಾಂತಿ ಸಿನಿಮಾ ಬಿಡುಗಡೆ ಸಮಯದಲ್ಲಿ ಸಂದರ್ಶನ ಒಂದರಲ್ಲಿ ನಟ ದರ್ಶನ ಹೇಳಿರುವ ಮಾತು ಹಿಂದೂ ಪರ ಸಂಘಟನೆ ಸೇರಿದಂತೆ ಕೆಲವು ಜನರ ಕೋಪಕ್ಕೆ ಗುರಿಯಾಗಿತ್ತು. ಅದೃಷ್ಟ ದೇವತೆ ಬಾಗಿಲು ತಟ್ಟುವುದು ಅಪರೂಪ, ಅಂತ ಸಮಯ ಬಂದ್ರೆ ಅದೃಷ್ಟ ದೇವತೆಯನ್ನು ಬೆಡ್ ರೂಮ್ಗೆ ಕರೆದುಕೊಂಡು ಹೋಗಿ ಬಟ್ಟೆ ಬಿಚ್ಚಿ ಕೂರಿಸಿಬಿಡಬೇಕು. ಈ ಹೇಳಿಕೆ ಕೆಲವರ ಮನಸ್ಸಿಗೆ ನೋವು ಉಂಟು ಮಾಡಿತ್ತು ಮತ್ತು ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಬದುಕಿದ್ದಾಗಲೇ ತೋರಿಸಿದ್ದಾರೆ
ಈ ಹಿಂದೆ ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ದರ್ಶನ್ ತಮ್ಮ ಅಭಿಮಾನಿಗಳನ್ನು ಹೊಗಳಿದ್ದರು. ಪುನೀತ್ ರಾಜ್ ಕುಮಾರ್ ಅವರು ನಿಧನ ಹೊಂದಿದ ನಂತರ ಸಿಕ್ಕ ಅಭಿಮಾನಿಗಳ ಪ್ರೀತಿಯನ್ನು ನನ್ನ ಅಭಿಮಾನಿಗಳು ನನಗೆ ಬದುಕಿದ್ದಾಗಲೇ ತೋರಿಸಿದ್ದಾರೆ ಎಂದಿದ್ದರು. ಆದರೆ ಈ ಹೇಳಿಕೆ ಅಪ್ಪು ಅಭಿಮಾನಿಗಳನ್ನು ಕೆರಳಿಸಿತ್ತು. ತನ್ನ ಅಭಿಮಾನಿಗಳ ಪ್ರೀತಿಯನ್ನು ಅಪ್ಪು ಸಾವಿನ ಜತೆ ಹೋಲಿಕೆ ಮಾಡಿಕೊಳ್ಳಬೇಕಿತ್ತಾ ಎಂದು ದರ್ಶನ್ ವಿರುದ್ಧ ಕಿಡಿಕಾರಿದ್ದರು. ಅಲ್ಲದೆ, ಇದೇ ಹೇಳಿಕೆಯ ಪರಿಣಾಮ ದರ್ಶನ್ ಮೇಲೆ ಪುನೀತ್ ಅಭಿಮಾನಿಗಳು ಚಪ್ಪಲಿ ಎಸೆದಿದ್ದರು. ಇದು ಕೂಡ ಭಾರಿ ವಿವಾದವಾಗಿತ್ತು.
ಪಬ್ ಪಾರ್ಟಿ ವಿವಾದ
ದರ್ಶನ್ ನಟನೆಯ ಕಾಟೇರ ಸಿನಿಮಾ ಭಾರಿ ಯಶಸ್ಸು ಕಂಡಿದ್ದು ಎಲ್ಲರಿಗೂ ತಿಳಿದೇ ಇದೆ. ಸಕ್ಸಸ್ ಹಿನ್ನೆಲೆಯಲ್ಲಿ ದರ್ಶನ್ ಅಂಡ್ ಟೀಮ್ ಜೆಟ್ ಲ್ಯಾಗ್ ಪಬ್ನಲ್ಲಿ ಒಟ್ಟಿಗೆ ಸೇರಿ ಪಾರ್ಟಿ ಮಾಡಿತ್ತು. ಆದರೆ, ಅವಧಿ ಮೀರಿ ಪಾರ್ಟಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆ ಬಳಿಕ ಪೊಲೀಸರು ನೋಟಿಸ್ ಕೊಟ್ಟ ಹಿನ್ನೆಲೆಯಲ್ಲಿ ದರ್ಶನ್, ರಾಕ್ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಷ್ ಮೊದಲಾದವರು ಪೊಲೀಸ್ ಠಾಣೆಗೆ ಬಂದು ವಿಚಾರಣೆ ಎದುರಿಸಿದ್ದರು.
ಮಾಧ್ಯಮಗಳಿಂದ ಬ್ಯಾನ್
ದರ್ಶನ್ಗೆ ಮಾತಿನ ಮೇಲೆ ಹಿಡಿತವಿಲ್ಲ ಎಂಬುದು ಬಹುತೇಕರಿಗೆ ತಿಳಿದಿದೆ. ಹೋಟೆಲ್ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎಂದು ಈ ಹಿಂದೆ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದರು. ಇದೇ ಪ್ರಕರಣ ಬಹಳ ಚರ್ಚೆಯಾಗುತ್ತಿರುವಾಗ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆ ಆಡಿಯೋದಲ್ಲಿ ದರ್ಶನ್ ಮಾಧ್ಯಮದವರನ್ನು ಬಾಯಿಗೆ ಬಂದಂತೆ ಬೈದಿದ್ದರು. ಬಳಿಕ ದರ್ಶನ್ರನ್ನು ಮಾಧ್ಯಮಗಳು ಬ್ಯಾನ್ ಮಾಡಿದ್ದವು. ಆದರೆ, ಕಾಟೇರ ಸಿನಿಮಾ ಬಿಡುಗಡೆಗೂ ಮುಂದೆ ಸಂಧಾನ ಮಾಡಿಕೊಂಡಿದ್ದರು.
ಇವತ್ತು ಇವಳು ಇರ್ತಾಳೆ, ನಾಳೆ ಅವಳು ಇರ್ತಾಳೆ
ಇದೇ ವರ್ಷದ ಫೆಬ್ರವರಿಯಲ್ಲಿ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಆವರಣದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರು ಚಲನಚಿತ್ರ ರಂಗಕ್ಕೆ ಕಾಲಿಟ್ಟು 25 ಸಂವತ್ಸರಗಳು ಪೂರ್ಣಗೊಂಡ ಹಿನ್ನಲೆಯಲ್ಲಿ‘ಬೆಳ್ಳಿಪರ್ವ ಡಿ.25 ’ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ್ದ ದರ್ಶನ್,ನನಗೆ ನನ್ನ ಅಭಿಮಾನಿಗಳೇ ಸ್ಟಾರ್ಸ್. ನನ್ನನ್ನು ಸಿನಿಮಾಗೆ ತಂದಿದ್ದು ರಾಮ್ಮೂರ್ತಿ ಅವರು. ನನ್ನ ಮೊದಲ ಸಿನಿಮಾ ನಿರ್ದೇಶಕ ಪಿ ಎನ್ ಸತ್ಯ ಅವರನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮೊದಲು ಅವಮಾನ, ಆಮೇಲೆ ಸನ್ಮಾನ. ನನ್ನಷ್ಟು ಕಾಂಟ್ರವರ್ಸಿ ಅಥವಾ ಕೆಟ್ಟ ಹುಡುಗ ಅಂತ ಹೇಳ್ತೀರಾ? ಹೌದು, 101 % ನಾನು ಕೆಟ್ಟವನೇ.. ನಾನು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳೋದಿಲ್ಲ. ಫ್ಯಾಮಿಲಿ ಸಮಸ್ಯೆಯೇ ಇರಲೀ, ಎಲ್ಲವನ್ನು ನಾನು ಬದಿಗಿಟ್ಟು ಕೆಲಸ ಮಾಡ್ತೀನಿ. ಇವಳು ಇವತ್ತು ಇರ್ತಾಳೆ, ನಾಳೆ ಅವಳು ಇರ್ತಾಳೆ. ನಾನು ಇವರಿಗೆಲ್ಲ ತಲೆ ಕೆಡಿಸಿಕೊಳ್ಳೋದಿಲ್ಲ. ನಾನು ಎಲ್ಲದಕ್ಕೂ ಚಿಂತೆ ಮಾಡಿದ್ರೆ ಚಿತ್ರರಂಗದಲ್ಲಿ 25 ವರ್ಷ ಕಳೆಯುತ್ತಾ ಇರಲಿಲ್ಲ ಎಂದಿದ್ದರು. ಈ ಸಂದರ್ಭದಲ್ಲಿ ಪವಿತ್ರಾ ಗೌಡ ಮತ್ತು ಪತ್ನಿ ವಿಜಯಲಕ್ಷ್ಮೀ ನಡುವೆ ಮಾತಿನ ಸಮರ ನಡೆದಿತ್ತು. ಇದನ್ನು ಉಲ್ಲೇಖಿಸಿ ದರ್ಶನ್ ಹೇಳಿದ್ದರು. ಆದರೆ, ದರ್ಶನ್ ದೃಷ್ಟಿಯಲ್ಲಿ ಹೆಣ್ಣು ಮಕ್ಕಳನ್ನು ಕೇವಲವಾಗಿ ನೋಡುತ್ತಾರೆ ಎಂಬ ವಿಚಾರಕ್ಕೆ ಭಾರಿ ವಿವಾದವಾಗಿತ್ತು. ಅಲ್ಲದೆ, ದರ್ಶನ್ ವಿರುದ್ಧ ಸಾಕಷ್ಟು ಮಹಿಳೆಯರು ಧ್ವನಿ ಎತ್ತಿದ್ದರು.
ಹುಲಿ ಉಗುರು
ಹುಲಿ ಉಗುರು ಪ್ರಕರಣದಲ್ಲೂ ದರ್ಶನ್ ಹೆಸರು ಬಹಳ ಚರ್ಚೆಯಾಗಿತ್ತು. ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಹುಲಿ ಉಗುರು ಧರಿಸಿದ್ದ ಪ್ರಕರಣದ ಬಳಿಕ ಅನೇಕ ಸೆಲೆಬ್ರಿಟಿಗಳ ಹೆಸರು ಕೂಡ ಹುಲಿ ಉಗುರಿನ ವಿಚಾರದಲ್ಲಿ ಕೇಳಿ ಬಂದಿತ್ತು. ಇದೇ ಸಂದರ್ಭದಲ್ಲಿ ದರ್ಶನ್ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಪೋಟೋ ವೈರಲ್ ಆಗಿತ್ತು. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ನಟ ದರ್ಶನ್ ಮನೆಯಲ್ಲಿ ಶೋಧ ನಡೆಸಿದ್ದರು. 8 ಹುಲಿ ಉಗುರಿನ ಪೆಂಡೆಂಟ್ ದರ್ಶನ್ ಮನೆಯಲ್ಲಿ ಸಿಕ್ಕಿದ್ದವು. ಆದರೆ ಅದೆಲ್ಲ ಅಸಲಿ ಹುಲಿ ಉಗುರು ಅಲ್ಲ ಎನ್ನುವುದು ತಿಳಿದುಬಂದಿತ್ತು. ಬಳಿಕ ಪ್ರಕರಣದ ಚರ್ಚೆ ಕಡಿಮೆಯಾಯಿತು.