ಸೀರೆ-ಬಳೆ ಕಳಿಸಿಕೊಡ್ತೀನಿ ಹಾಕಿಕೊಳ್ಳಿ ... ಸೂರ್ಯ, ವಿಜಯ್​ಗೆ ಟಾಂಗ್​ ಕೊಟ್ಟ ಮೀರಾ

Meera Mithun - Final
Published on

ಕಾಲಿವುಡ್​ನಲ್ಲಿ ಇತ್ತೀಚಿನ ದಿನಗಳಲ್ಲಿ ತಮ್ಮ ಮಾತುಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವವರು ಎಂದರೆ ಅದು ನಟಿ ಮತ್ತು 'ಬಿಗ್​ ಬಾಸ್​' ಖ್ಯಾತಿಯ ಮೀರಾ ಮಿಥುನ್​. ಒಂದಿಷ್ಟು ಚಿತ್ರಗಳಲ್ಲಿ ನಟಿಸಿ ಸೋತಿರುವ ಅವರು, ಬರೀ ಮಾತು ಮತ್ತು ಜಗಳಗಳಿಂದಲೇ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ.

ಕಳೆದ ತಿಂಗಳಷ್ಟೇ ಮೀರಾ ಒಂದು ಬಾಂಬು ಸಿಡಿಸಿದ್ದರು. ರಜನಿಕಾಂತ್​ ಮತ್ತು ವಿಜಯ್​ ಇಬ್ಬರೂ ತಮ್ಮ ಮಾನಹಾನಿ ಮಾಡುತ್ತಿದ್ದು, ಅದು ಹೀಗೆಯೇ ಮುಂದುವರೆದರೆ, ತಾನು ಅವರ ವಿರುದ್ಧ ಲೀಗಲ್​ ಆಕ್ಷನ್​ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದರು. ಆ ನಂತರ ತ್ರಿಷಾ, ಹೊಟ್ಟೆಕಿಚ್ಚಿನಿಂದ ತಮಗೆ ಸಿಗುತ್ತಿರುವ ಅವಕಾಶಗಳನ್ನು ಕಸಿಯುತ್ತಿದ್ದಾರೆ ಎಂದು ದೂರಿದ್ದರು.

ಈಗ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಟಾಲಿವುಡ್​ನ ಟಾಪ್​ ನಟರಾದ ವಿಜಯ್​ ಮತ್ತು ಸೂರ್ಯ ಇಬ್ಬರಿಗೂ ಕ್ಲಾಸ್​ ತೆಗೆದುಕೊಂಡಿದ್ದಾರೆ. ನೀವು ನಿಮ್ಮ ಅಭಿಮಾನಿಗಳಿಗೆ ಹೇಳಿಕೊಟ್ಟಿರುವುದು ಇದೇನಾ ಎಂದು ಪ್ರಶ್ನಿಸಿದ್ದಾರೆ.

ಇಷ್ಟಕ್ಕೂ ಆಗಿದ್ದೇನೆಂದರೆ, ಮೀರಾ ಇತ್ತೀಚಿನ ದಿನಗಳಲ್ಲಿ ಟಾಲಿವುಡ್​ನ ಟಾಪ್​ ನಟರ ಮೇಲೆ ಸೋಷಿಯಲ್​ ಮೀಡಿಯಾದಲ್ಲಿ ಹರಿಹಾಯುತ್ತಲೇ ಇದ್ದಾರೆ. ಈ ಪಟ್ಟಿಯಲ್ಲಿ ವಿಜಯ್​ ಮತ್ತು ಸೂರ್ಯ ಸಹ ಇದ್ದಾರೆ. ತಮ್ಮ ಮೆಚ್ಚಿನ ನಟರ ವಿರುದ್ಧ ಸತತ ದಾಳಿ ಮಾಡುತ್ತಿರುವ ಮೀರಾಗೆ ಅಭಿಮಾನಿಗಳು ಹಿಗ್ಗಾಮುಗ್ಗಾ ಬಯ್ದಿದ್ದಾರೆ. ಅದೇ ಕಾರಣಕ್ಕೆ ಮೀರಾಗೆ ವಿಜಯ್​ ಮತ್ತು ಸೂರ್ಯ ಮೇಲೆ ಇನ್ನಷ್ಟು ಕೋಪ ಹೆಚ್ಚಾಗಿದೆ.

ಈ ಕುರಿತು ಅವರು ಒಂದು ವಿಡಿಯೋ ಮಾಡಿದ್ದಾರೆ. ಅದರಲ್ಲಿ ಮೊದಲಿಗೆ ಅಭಿಮಾನಿಗಳಿಗೆ ಝಾಡಿಸಿದ್ದಾರೆ. 'ನೀವು ನನಗೆ ಶಾಪ ಹಾಕುತ್ತಲೇ ಇದ್ದೀರಾ? ಇದೇ ರೀತಿ ಮುಂದುವರೆದರೆ ನಾನು ಸೂರ್ಯನ ಮಡದಿ ಜ್ಯೋತಿಕಾ ಮತ್ತು ವಿಜಯ್​ ಹೆಂಡತಿ ಸಂಗೀತಾ ಬಗ್ಗೆಯೂ ಇದೇ ತರಹ ಪದಗಳನ್ನು ಉಪಯೋಗಿಸುತ್ತೇನೆ' ಎಂದು ಅವರು ಧಮ್ಕಿ ಹಾಕಿದ್ದಾರೆ.

ಇನ್ನು ಸ್ಟಾರ್​ ನಟರುಗಳನ್ನು ತರಾಟೆಗೆ ತೆಗೆದುಕೊಂಡಿರುವ ಅವರು, 'ವಿಜಯ್​ ಮತ್ತು ಸೂರ್ಯ ಅವರ ಅಭಿಮಾನಿಗಳಿಗೆ ನಿಜಕ್ಕೂ ನಾಜಿಕೆ ಇಲ್ಲ. ನೀವು ನಿಮ್ಮ ಅಭಿಮಾನಿಗಳಿಗೆ ಹೇಳಿಕೊಟ್ಟಿರುವುದು ಇದನ್ನೇ ಏನು? ನೀವು ಸ್ಟಾರ್​ಗಳು. ನಿಮ್ಮ ಲೆವೆಲ್​ ಹೇಗಿರಬೇಕು. ಆದರೆ, ಅಭಿಮಾನಿಗಳನ್ನು ಬಿಟ್ಟು ಹೆಂಗಸರನ್ನು ಹೆದರಿಸುತ್ತೀರಿ. ನಾಳೆಯಿಂದ ಗಂಡಸರು ಎಂದು ಕರೆದುಕೊಳ್ಳಬೇಡಿ. ಸೀರೆ, ಬಳೆ ಕಳಿಸಿಕೊಡುತ್ತೀನಿ, ಹಾಕಿಕೊಳ್ಳಿ' ಎಂದು ಸೂರ್ಯ ಮತ್ತು ವಿಜಯ್​ಗೆ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net