

ಬೆಂಗಳೂರು: ಯಶ್ ನಟನೆಯ ‘ಕೆಜಿಎಫ್; ಚಾಪ್ಟರ್ 2’ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 14ರಂದು ವಿಶ್ವದಾದ್ಯಂತ ರಾಕಿ ಭಾಯ್ ಅಬ್ಬರ ಶುರುವಾಗಲಿದೆ. ಹೀಗಿರುವಾಗಲೇ ‘ಕೆಜಿಎಫ್’ ಚಿತ್ರಕ್ಕೀಗ ತಮಿಳಿನ ‘ಬೀಸ್ಟ್’ ಅಡ್ಡಗಾಲಾಗಿದೆ! ಕಾಲಿವುಡ್ ಸ್ಟಾರ್ ನಟ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ತನ್ನ ಬಿಡುಗಡೆ ದಿನಾಂಕವನ್ನು ಘೋಷಿಸಿಕೊಂಡಿದೆ.
ಏಪ್ರಿಲ್ನಲ್ಲಿ ಬರುವುದಾಗಿ ಹೊಸ ಪೋಸ್ಟರ್ ಸಮೇತ ಸುಳಿವು ನೀಡಿದೆ. ವಿಜಯ್ ಸಿನಿಮಾ ಅಂದರೆ ನಿರೀಕ್ಷೆಗಳು ಸಹಜವಾಗಿ ಆಕಾಶ ಮುಟ್ಟಿರುತ್ತವೆ. ಸ್ಕ್ರೀನ್ಗಳಲ್ಲಿಯೂ ಬಹುಪಾಲನ್ನು ಅದೇ ಚಿತ್ರ ಆಕ್ರಮಿಸಿಕೊಂಡಿರುತ್ತದೆ. ಹೀಗಿರುವಾಗ ‘ಬೀಸ್ಟ್’ ಚಿತ್ರದ ನಡೆ ಕೆಜಿಎಫ್ಗೆ ತೊಡಕಾಗಲಿದೆ ಎಂಬ ಮಾತು ಕೇಳಿಬರುತ್ತಿವೆ. ಕೇವಲ ಇದೊಂದೆ ಚಿತ್ರವಲ್ಲ ಬಾಲಿವುಡ್ ನಟ ಆಮೀರ್ ಖಾನ್ ನಟನೆಯ ‘ಲಾಲ್ಸಿಂಗ್ ಛಡ್ಡಾ’ ಚಿತ್ರವೂ ಏ.14ರಂದೇ ತೆರೆಗೆ ಬರುತ್ತಿರುವುದರಿಂದ ‘ಕೆಜಿಎಫ್’ ಹಾದಿ ಸುಗಮವಾಗಿಲ್ಲ ಎಂದೇ ಹೇಳಲಾಗುತ್ತಿದೆ. ಇದೆಲ್ಲವನ್ನು ಬದಿಗಿಟ್ಟರೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಕೆಜಿಎಫ್ 2’ ಚಿತ್ರಕ್ಕೆ ದೊಡ್ಡ ಮಟ್ಟದ ಹೈಪ್ ಸೃಷ್ಟಿಯಾಗಿರುವುದು ಬೋನಸ್ ಪಾಯಿಂಟ್.
ಯಶ್ ಬರ್ತ್ಡೇಗಿಲ್ಲ ಕೆಜಿಎಫ್ ಅಪ್ಡೇಟ್: ಜ.8ಕ್ಕೆ ಯಶ್ ಬರ್ತ್ಡೇ. ಹಾಗಾಗಿ ‘ಕೆಜಿಎಫ್ ಚಾಪ್ಟರ್ 2’ ಚಿತ್ರದಿಂದ ಟ್ರೇಲರ್ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಸದ್ಯಕ್ಕೆ ಟ್ರೇಲರ್ ಇಲ್ಲ ಎಂದು ಸ್ವತಃ ಯಶ್ ಸ್ಪಷ್ಟಪಡಿಸಿದ್ದಾರೆ. ಫೆಬ್ರವರಿ ಕೊನೇ ವಾರ ಅಥವಾ ಮಾರ್ಚ್ನಲ್ಲಿ ಟ್ರೇಲರ್ ಬಿಡುವುದಾಗಿ ಹೇಳಿಕೊಂಡಿದ್ದಾರೆ.