ಹೆಂಡ್ತಿ ದೂರ, ಬೇಕಂತಲೇ ಕಮಲ್​ ಹಾಸನ್​ ಚಿತ್ರಗಳಿಂದ ನಿರ್ಲಕ್ಷ್ಯ! ರಘುವರನ್​ ಜೀವನದ ಕಹಿ ಕ್ಷಣಗಳಿವು...Raghuvaran

Raghuvaran
Published on

Raghuvaran : ರಘುವರನ್ ತಮಿಳು ಸಿನಿಮಾಗಳಲ್ಲಿ ತಮ್ಮ ಖಳನಾಯಕ ಪಾತ್ರಗಳಿಂದಲೇ ಖ್ಯಾತಿ ಗಳಿಸಿದ ನಟ. ರವಿಚಂದ್ರನ್​ ಅಭಿನಯದ ಕಲಾವಿದ ಸೇರಿದಂತೆ ಕನ್ನಡದಲ್ಲೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದು, ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ನಟಿ ರೋಹಿಣಿ ಅವರನ್ನು ಮದ್ವೆಯಾಗಿ, ವಿಚ್ಛೇದನ ಪಡೆದುಕೊಂಡ ಸುದ್ದಿ ಆ ಸಂದರ್ಭದಲ್ಲಿ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ನಟ ಮತ್ತು ನಿರ್ದೇಶಕ ಅಲೆಪ್ಪಿ ಅಶ್ರಫ್, ರಘುವರನ್ ಅವರ ಜೀವನದಲ್ಲಿ ನಡೆದ ಕೆಲವು ದುರಂತಗಳ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ ಹಂಚಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ನಟ ರಘುವರನ್ ಅವರ ನಟನಾ ಕೌಶಲ್ಯವನ್ನು ಅರಿಯದವರೇ ಇಲ್ಲ. ಅಡ್ಯಾರ್ ಫಿಲ್ಮ್ ಇನ್ಸ್ಟಿಟ್ಯೂಟ್​ನಿಂದ ಪದವಿ ಪಡೆದ ನಂತರ, ನಟನೆ ಅವರಿಗೆ ಒಂದು ತಪಸ್ಸು ಆಗಿತ್ತು. ನಟಿಸಲು ಅವಕಾಶ ಕೇಳಿಕೊಂಡು ಬಂದ ರಘುವರನ್, ಬಹಳಷ್ಟು ಅಪಹಾಸ್ಯಗಳನ್ನು ಎದುರಿಸಬೇಕಾಯಿತು. ಆರು ಅಡಿ ಒಂದು ಇಂಚು ಎತ್ತರದ ರಘುವರನ್​ಗೆ ನಾಯಕಿ ಎಲ್ಲಿಂದ ಸಿಗ್ತಾರೆ ಎಂದು ಅಪಹಾಸ್ಯ ಮಾಡಿದರು. ಹಣಕ್ಕಾಗಿ ನಾನು ಚಿತ್ರರಂಗಕ್ಕೆ ಬಂದಿಲ್ಲ ಎಂದು ರಘುವರನ್ ಈ ಹಿಂದೆಯೇ ಹೇಳಿದ್ದರು. ಆದರೂ ಅವರಿಗೆ ಅವಕಾಶಗಳ ಕೊರತೆ ಕಾಡಿತು.

ರಘುವರನ್ 'ಚೆನ್ನೈ ಕಿಂಗ್ಸ್' ಎಂಬ ನಾಟಕ ಕಂಪನಿಯನ್ನು ಸೇರಿದರು. ಆ ಸಮಯದಲ್ಲಿ, ಪ್ರಸಿದ್ಧ ತಮಿಳು ನಟ ನಾಸರ್ ಕೂಡ ಆ ಕಂಪನಿಯಲ್ಲಿ ನಟಿಸುತ್ತಿದ್ದರು. ರಘುವರನ್ ಸುಮಾರು ಮೂರು ವರ್ಷಗಳ ಕಾಲ ಆ ನಾಟಕ ಕಂಪನಿಯಲ್ಲಿ ಕೆಲಸ ಮಾಡಿದರು. ನಂತರ, ಅವರಿಗೆ ತಮಿಳು ಚಿತ್ರಗಳಲ್ಲಿ ಯೋಗ್ಯ ಪಾತ್ರಗಳು ಸಿಗಲು ಪ್ರಾರಂಭಿಸಿದವು. ಸಂಸಾರಂ ಅಥ್ ಮಿನ್ಸಾರಂ ಚಿತ್ರದಲ್ಲಿ ರಘುವರನ್ ಅವರ ಅಭಿನಯವು ಬಹಳ ಗಮನ ಸೆಳೆಯಿತು. ಇದಾದ ನಂತರ, ಖಳನಾಯಕ ಪಾತ್ರಗಳಲ್ಲಿ ನಟಿಸಲು ಪ್ರಾರಂಭಿಸಿದಾಗ ರಘುವರನ್​ ಇನ್ನಷ್ಟು ಮಿಂಚಿದರು.

ರಜನಿಕಾಂತ್ ಅವರಿಗೆ ರಘುವರನ್​ ಮೇಲೆ ವಿಶೇಷವಾದ ಒಲವಿತ್ತು. ಅವರ ಅನೇಕ ಚಿತ್ರಗಳಲ್ಲಿ ರಘುವರನ್​​ ಖಳನಾಯಕರಾಗಿದ್ದರು. ಆದರೆ, ಕಮಲ್​ ಹಾಸನ್, ತಮ್ಮ ಚಿತ್ರಗಳಿಂದ ಅವರನ್ನು ದೂರವಿಟ್ಟರಂತೆ! ರಘುವರನ್ ನಟನೆಯಲ್ಲಿ ಕಮಲ್​ ಹಾಸನ್ ಅವರನ್ನೂ ಮೀರಿಸುತ್ತಾರೆ ಎಂದು ಕೆಲವು ಮಾಧ್ಯಮಗಳು ಆ ಸಂದರ್ಭದಲ್ಲಿ ವರದಿ ಮಾಡಿದ್ದವು. ಇದು ಕೂಡ ಒಂದು ಕಾರಣ ಇರಬಹುದು ಎನ್ನಲಾಗಿದೆ. ಸಿನಿಮಾ ಒಂದೆಡೆಯಾದರೆ, ರಘುವರನ್ ಮಾದಕ ವ್ಯಸನಕ್ಕೆ ಒಳಗಾಗಿದ್ದರು. ರಘುವರನ್ ಮತ್ತು ರೋಹಿಣಿ 1996 ರಲ್ಲಿ ವಿವಾಹವಾದರು. ಅವರು ಎಂಟು ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ, ವಿಚ್ಛೇದನ ಪಡೆದುಕೊಂಡರು. ಇದಕ್ಕೆ ಕಾರಣ ಮಾದಕ ವ್ಯಸನ ಎಂದು ಅಶ್ರಫ್​ ಹೇಳಿದ್ದಾರೆ.

ಅಂದಹಾಗೆ ರಘುವರನ್ ಸಾಯುವ ಹತ್ತು ದಿನಗಳ ಮೊದಲು ಮಗನನ್ನು ನೋಡಲು ರೋಹಿಣಿ ಬಳಿಗೆ ಹೋಗಿದ್ದರು. ಈ ವಿಚಾರವನ್ನು ಸ್ವತಃ ರೋಹಿಣಿ ಅವರೇ ಹೇಳಿಕೊಂಡಿದ್ದರು. ತುಂಬಾ ಕಷ್ಟ ಅನುಭವಿಸಿ, 2008, ಮಾರ್ಚ್ 19 ರಂದು ರಘುವರನ್​ ನಿಧನರಾದರು. ಹೃದಯಾಘಾತದಿಂದ ಸಾವು ಸಂಭವಿಸಿತು ಎನ್ನಲಾಗಿದೆ. ಆದರೆ, ಅತಿಯಾದ ಮಾದಕ ದ್ರವ್ಯ ಸೇವನೆಯೇ ಕಾರಣ ಎಂದು ಅಶ್ರಫ್ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net