

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದಿದೆ. ಈ ಪ್ರಕರಣವನ್ನು ತನಿಖೆ ಮಾಡುತ್ತಿರುವ ಸಿಬಿಐ, ಇದರ ಹಿಂದೆ ಡ್ರಗ್ಸ್ ಜಾಲ ಇರಬಹುದು ಎಂಬ ಅನುಮಾನವನ್ನು ಹೊರಹಾಕಿದೆ.
ಇದನ್ನೂ ಓದಿ: ಉದಯ್ ಕಿರಣ್ ಕೇಸ್ನ ತನಿಖೆಯನ್ನೂ ಸಿಬಿಐಗೆ ವಹಿಸಿ …
ಪ್ರಮುಖವಾಗಿ, ಸುಶಾಂತ್ ಪ್ರಕರಣದ ಪ್ರಮುಖ ಆರೋಪಿಯಾದ ಆತನ ಗೆಳತಿ ರಿಯಾ ಚಕ್ರವರ್ತಿ ವಾಟ್ಸಪ್ ಮೂಲಕ ಡ್ರಗ್ಸ್ಗೆ ಸಂಬಂಧಿಸಿದಂತೆ ಹಲವು ವಿಷಯಗಳ ಬಗ್ಗೆ ಸಂದೇಶ ಕಳಿಸಿರುವುದು ಬೆಳಕೆಗೆ ಬಂದಿದೆ. 2017ರಿಂದ 2019ರವರೆಗೂ ರಿಯಾ ಡ್ರಗ್ಸ್ ವಿಷಯದ ಬಗ್ಗೆ ಕೆಲವರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.
ಈ ವಿಷಯವಾಗಿ ಇದೀಗ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಎಂಟ್ರಿ ಕೊಡುವ ಸಾಧ್ಯತೆಗಳು ಹೆಚ್ಚಿದೆ. ಈ ವಿಷಯವಾಗಿ ಎನ್ಸಿಬಿಯ ನಿರ್ದೇಶಕರಾದ ರಾಕೇಶ್ ಅಸ್ತಾನ ಅವರು ಪ್ರತಿಕ್ರಿಯಿಸಿದ್ದು, ತಮಗೆ ಇಡಿ ಯಿಂದ ಒಂದು ಪತ್ರ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಅದರ ಪ್ರಕಾರ, ಸುಶಾಂತ್ ಮತ್ತು ರಿಯಾಗೆ ಡ್ರಗ್ಸ್ ಹಂಚಲಾಗುತ್ತಿದ್ದ ವಿಷಯ ಬೆಳಕಿಗೆ ಬಂದಿದ್ದು, ಈ ಕುರಿತು ಎನ್ಸಿಬಿಯ ತಂಡ ಶೀಘ್ರದಲ್ಲೇ ಸಂಬಂಧಪಟ್ಟವರನ್ನು ವಿಚಾರಣೆ ನಡೆಸಲಿದೆ ಎಂದು ಹೇಳಿದ್ದಾರೆ.
ಯಾವಾಗ ಎನ್ಸಿಬಿ ಈ ಪ್ರಕರಣದಲ್ಲಿ ತನಿಖೆ ಮಾಡಬಹುದು ಎಂಬ ವಿಷಯ ಹೊರಬಿತ್ತೋ, ಅದರಿಂದ ದೊಡ್ಡ ದೊಡ್ಡ ಸ್ಟಾರ್ಗಳಿಗೆ ಬಹಳ ಕಷ್ಟವಿದೆ ಎಂದು ನಟಿ ಕಂಗನಾ ರಣಾವತ್ ಹೇಳಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಏನಾದರೂ ಈ ವಿಷಯದಲ್ಲಿ ಎಂಟ್ರಿ ಕೊಟ್ಟರೆ, ಆಗ ಬಹಳಷ್ಟು ಜನ ಸ್ಟಾರ್ ನಟರಗಳು ಕಂಬಿ ಎಣಿಸಬೇಕಾಗುತ್ತದೆ. ಎಲ್ಲರ ಬ್ಲಡ್ ಟೆಸ್ಟ್ ಮಾಡಿದರೆ, ಆಗ ಭಯಂಕರ ರಹಸ್ಯಗಳು ಹೊರಬೀಳುತ್ತವೆ. ಸ್ವಚ್ಛ ಭಾರತ ಮಿಷನ್ನಡಿ, ಬಾಲಿವುಡ್ ಎಂಬ ಗಟರ್ ಕ್ಲೀನ್ ಮಾಡುವುದಕ್ಕೆ ಇದು ಸಕಾಲ' ಎಂದು ಕಂಗನಾ ಹೇಳಿಕೊಂಡಿದ್ದಾರೆ.