'ಆಕ್ಟ್​ 1978'ಗೆ ಸೆನ್ಸಾರ್​ ಗ್ರೀನ್​ ಸಿಗ್ನಲ್​ ...

Act 1978 - Final
Published on

ತಮ್ಮ ಹಿಂದಿನ ಎರಡು ಚಿತ್ರಗಳಂತೆ ಈ ಬಾರಿ ಸಹ ಮಂಸೋರೆ ಹೆಚ್ಚು ಸುದ್ದಿ ಮಾಡಲಿಲ್ಲ. ಸದ್ದಿಲ್ಲದೆ ಚಿತ್ರೀಕರಣ ಮುಗಿಸಿರುವ ಅವರು, ಅಷ್ಟೇ ಅಲ್ಲ ಸದ್ದಿಲ್ಲದೆ ಬಿಡುಗಡೆ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ. ಈ ಮಧ್ಯೆ 'ಆಕ್ಟ್​ 1978' ಚಿತ್ರವನ್ನು ನೋಡಿರುವ ಸೆನ್ಸಾರ್​ ಮಂಡಳಿಯು, 'ಯು' ಪ್ರಮಾಣ ಪತ್ರ ನೀಡಿದೆ.

ಚಿತ್ರ ನೋಡಿದವರೆಲ್ಲಾ ಇದೊಂದು ವಿಶೇಷ ಪ್ರಯತ್ನ ಎಂದು ಮಂಸೋರೆ ಅವರಿಗೆ ಹೇಳುತ್ತಿದ್ದಾರಂತೆ. ಈ ಕುರಿತು 'ವಿಜಯವಾಣಿ'ಯೊಂದಿಗೆ ಮಾತನಾಡಿರುವ ಅವರು, 'ಅಧಿಕಾರಶಾಹಿ, ರಾಜಕೀಯ, ಎಮೋಷನ್​, ಥ್ರಿಲ್​ ಎಲ್ಲವೂ ಇರುವ ಚಿತ್ರ ಇದು. ಜತೆಗೆ ಒಂದೊಳ್ಳೆಯ ಸಂದೇಶ ಸಹ ಇದೆ. ಇವೆಲ್ಲವೂ ಬಹಳ ಚೆನ್ನಾಗಿ ಬ್ಲೆಂಡ್​ ಆಗಿದೆ' ಎನ್ನುತ್ತಾರೆ ಅವರು.

ಇದು ಯಾವುದೋ ಒಂದು ಘಟನೆಯನ್ನಾಧರಿಸಿದ ಚಿತ್ರವಲ್ಲ, ಬದಲಿಗೆ ಚಿತ್ರದಲ್ಲಿ ಹಲವು ಘಟನೆಗಳನ್ನು ನೋಡಬಹುದು ಎನ್ನುವ ಅವರು, 'ಪ್ರತಿಯೊಬ್ಬರಿಗೂ ಸರ್ಕಾರಿ ಕಚೇರಿಗೆ ಹೋದ ಅನುಭವ ಇದ್ದೇ ಇರುತ್ತದೆ. ಅದರ ರಿಯಾಕ್ಷನ್​ ರೂಪದ ಕಥೆ. ಸಾಮಾನ್ಯ ಮನುಷ್ಯನೊಬ್ಬ ಪ್ರತಿಕ್ರಿಯೆ ಕೊಟ್ಟರೆ, ಅದರ ತೀವ್ರತೆ ಹೇಗಿರುತ್ತದೆ' ಎಂಬುದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರಂತೆ.

ಈ ಚಿತ್ರದ ಮುಖ್ಯ ಎಳೆ ಅವರದ್ದಂತೆ. ಇನ್ನು ಅದಕ್ಕೆ ಜೀವ ತುಂಬಿಸಿದ್ದು ಟಿ.ಕೆ. ದಯಾನಂದ್​​. ಅದಕ್ಕೊಂದು ರೂಪ ಕೊಟ್ಟಿದ್ದು ವೀರೇಂದ್ರ. ಹಾಗಾಗಿ ಈ ಚಿತ್ರವನ್ನು ಮೂರೂ ಜನ ಸೇರಿ ರೂಪಿಸಿದ್ದಾಗಿ ಹೇಳುತ್ತಾರೆ ಮಂಸೋರೆ. 'ಇಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಎಂದು ಹೇಳುವುದು ಕಷ್ಟ. ಮೂರೂ ಜನ ಈಕ್ವಲ್​ ಆಗಿ ಕೆಲಸ ಮಾಡಿದ್ದೇವೆ' ಎನ್ನುತ್ತಾರೆ ಮಂಸೋರೆ.

ಚಿತ್ರದಲ್ಲಿ ಯಜ್ನಾ ಶೆಟ್ಟಿ, ಅಚ್ಯುತ್​ ಕುಮಾರ್, ಶ್ರುತಿ, ದತ್ತಣ್ಣ, ಸುಧಾ ಬೆಳವಾಡಿ, ರವಿ ಭಾಟ್​, ಬಲಾ ರಾಜವಾಡಿ, ಕೃಷ್ಣ ಹೆಬ್ಬಾಳೆ ಸೇರಿದಂತೆ ಹಲವರು ಪ್ರತಿಭಾವಂತ ಕಲಾವಿದರ ದಂಡೇ ಇದೆ. ಇನ್ನು ಸತ್ಯ ಹೆಗಡೆ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಸೆಪ್ಟೆಂಬರ್​ 15ರವರೆಗೂ ನೋಡಿಕೊಂಡು, ಚಿತ್ರ ಬಿಡುಗಡೆಯ ದಿನಾಂಕವನ್ನು ಘೋಷಿಸುವುದಾಗಿ ಹೇಳುವ ಮಂಸೋರೆ, 'ಸೆಪ್ಟೆಂಬರ್​ 15ಕ್ಕೆ ಚಿತ್ರಪ್ರದರ್ಶನ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗೇನಾದರೂ ಆದರೆ, ತಕ್ಷಣ ಬಿಡುಗಡೆಯ ದಿನಾಂಕ ಘೋಷಿಸುತ್ತೇವೆ. ತಡವಾದರೆ, ಪರ್ಯಾಯ ವ್ಯವಸ್ಥೆಯ ಬಗ್ಗೆ ಯೋಚಿಸಬೇಕಾಗುತ್ತದೆ' ಎನ್ನುತ್ತಾರೆ ಅವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net