

ಬೆಂಗಳೂರು: ತಬಲಾ ನಾಣಿ ಮತ್ತು ಸ್ನಢಹಿತರು ಮೊದಲ ಬಾರಿಗೆ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ 'ನೆನಪಿರಲಿ' ಪ್ರೇಮ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಈಗ ಆ ಚಿತ್ರಕ್ಕೆ 'ಟಗರು' ಖ್ಯಾತಿಯ ಮಾನ್ವಿತಾ ಕಾಮತ್ ಎಂಟ್ರಿಯಾಗಿದೆ.
ಮಾನ್ವಿತಾ ಕಳೆದ ಎರಡ್ಮೂರು ವರ್ಷಗಳಿಂದ ಕಾರಣಾಂತರಗಳಿಂದ ಯಾವುದೇ ಹೊಸ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ. ಇನ್ನು, ಕಳೆದ ವರ್ಷ ಬಿಡುಗಡೆಯಾದ 'ಶಿವ 143' ಹೊರತುಪಡಿಸಿದರೆ, ಮಾನ್ವಿತಾ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಈಗ ಮಾನ್ವಿತಾ, ಕೊನೆಗೂ ಕ್ಯಾಮೆರಾ ಮುಂದೆ ಬಂದು ನಿಂತಿದ್ದಾರೆ. ಚಿತ್ರದಲ್ಲಿ ಪ್ರೇಮ್ಗೆ ಜೋಡಿಯಾಗಿ ಮಾನ್ವಿತಾ ಕಾಮತ್ ಬಣ್ಣ ಹಚ್ಚುತ್ತಿದ್ದಾರೆ. ಈಗಾಗಲೇ ಮಾನ್ವಿತಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಕೆ.ಆರ್.ಎಸ್. ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಅಥರ್ವ ಆರ್ಯ ನಿರ್ದೇಶನ ಮಾಡುತ್ತಿದ್ದಾರೆ. ಅಥರ್ವ ಈ ಹಿಂದೆ ‘ಜೂಟಾಟ’ ಮತ್ತು ‘ಗುಬ್ಬಚ್ಚಿ’ ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದು, ಇದವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೂರನೆಯ ಸಿನಿಮಾ ಇದಾಗಿದೆ.
ತಂದೆಯ ಮಹತ್ವ ಸಾರುವ ಸಿನಿಮಾ ಈ ಚಿತ್ರದಲ್ಲಿ ಕುಟುಂಬ ಅಥವಾ ಸಮಾಜದಲ್ಲಿ ತಂದೆಯನ್ನು ಕಡೆಗಣಿಸಿದಾಗ, ಆತ ಯಾವ ರೀತಿ ನೋವು ಅನುಭವಿಸುತ್ತಾನೆ ಎನ್ನುವುದು ಚಿತ್ರದ ಕಥೆ. ತಂದೆಯ ಪಾತ್ರದಲ್ಲಿ ತಬಲ ನಾಣಿ ಕಾಣಿಸಿಕೊಳ್ಳುತ್ತಿದ್ದು, ಸಂಜಯ್ ಹಾಗೂ ಜೀವಿತ ವಸಿಷ್ಠ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ಬಾಲ ರಾಜ್ವಾಡಿ, ಗಿರೀಶ್ ಜತ್ತಿ, ವಿಜಯ್ ಚೆಂಡೂರ್, ಅರುಣಾ ಬಾಲರಾಜ್ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರದಲ್ಲಿ ನಾಗಾರ್ಜುನ ಆರ್.ಡಿ ಅವರ ಛಾಯಾಗ್ರಹಣ, ಆಕಾಶ್ ಪರ್ವ ಅವರ ಸಂಗೀತ ಈ ಚಿತ್ರಕ್ಕಿದೆ.