

ಬೆಂಗಳೂರು: ಸಿನಿಮಾ ತಾರೆಯರಿಗೆ ಹ್ಯಾಕರ್ಸ್ ಕಾಟ ತಪ್ಪಿದ್ದಲ್ಲ. ಈ ಹಿಂದೆ ಸ್ಟಾರ್ ನಟ-ನಟಿಯರ ಸೋಷಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಕ್ ಮಾಡಿದ ಹಲವು ಉದಾಹರಣೆಗಳಿವೆ. ಈಗ ಕನ್ನಡದ ಇಬ್ಬರು ಜನಪ್ರಿಯ ನಟಿಯರು ಅದಕ್ಕೆ ತುತ್ತಾಗಿದ್ದಾರೆ. ಹೀಗೆ ಸೋಷಿಯಲ್ ಮೀಡಿಯಾ ಖಾತೆಗಳು ಹ್ಯಾಕ್ ಆದವರು ಮಾನ್ವಿತಾ ಕಾಮತ್ ಮತ್ತು ಆಶಿಕಾ ರಂಗನಾಥ್.
ಶನಿವಾರ ಮಾನ್ವಿತಾರ ಇನ್ಸ್ಟಾಗ್ರಾಂ ಖಾತೆಗೆ, ಕಾಪಿರೈಟ್ ಕುರಿತಾದ ಒಂದು ಮೆಸೇಜ್ ಬಂದಿದೆ. ಆ ಮೆಸೇಜ್ ತೆಗೆಯುತ್ತಿದ್ದಂತೆಯೇ ಹ್ಯಾಕ್ ಆಗಿದೆ. ಅಷ್ಟೇ ಅಲ್ಲ, ಅವರ ಅಕೌಂಟ್ನಿಂದ ಬೇರೆಯವರಿಗೂ ಅದೇ ತರಹ ಮೆಸೇಜ್ ಹೋಗಿದೆ. ಆ ಪೈಕಿ ಆಶಿಕಾ ರಂಗನಾಥ್ ಸಹ ಒಬ್ಬರು. ಅವರಿಗೂ ಅದೇ ಸಮಸ್ಯೆ ಎದುರಾದಾಗ, ತಕ್ಷಣ ಎಚ್ಚೆತ್ತುಕೊಂಡಿದ್ದಾರೆ. ತಮ್ಮ ಅಕೌಂಟ್ ಹ್ಯಾಕ್ ಆಗಿದೆ ಎಂಬ ಸಂದೇಶವನ್ನೂ ರವಾನಿಸಿದ್ದಾರೆ. ಮಾನ್ವಿತಾಗೂ ಫೋನ್ ಮಾಡಿ ಈ ರೀತಿ ಆಗಿದೆ ಎಂದು ಎಚ್ಚರಿಸಿದ್ದಾರೆ. ಕೊನೆಗೆ ಇಬ್ಬರೂ ತಮ್ಮ ಖಾತೆಗಳನ್ನು ರೀಸೆಟ್ ಮಾಡಿಕೊಂಡಿದ್ದಾರೆ. ರೀಸೆಟ್ ಮಾಡಿಕೊಂಡ ನಂತರ ಖಾತೆ ಅವರ ಸುಪರ್ದಿಗೆ ವಾಪಸ್ ಬಂದಿದೆ.
ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಮಾನ್ವಿತಾ, ‘ಅವರು ಕಳಿಸಿದ ಲಿಂಕ್ ಬಹಳ ಒರಿಜಿನಲ್ ಆಗಿತ್ತು. ಯಾರೋ ಹ್ಯಾಕರ್ಸ್ ಕಳಿಸಿರಬಹುದು ಎಂದು ಗೊತ್ತಾಗದಷ್ಟು ನೈಜವಾಗಿತ್ತು. ಹಾಗಾಗಿ ಅವರು ಕಳಿಸಿದ ಲಿಂಕ್ ಓಪನ್ ಮಾಡಿದೆ. ಆ ನಂತರ ನನ್ನ ಅಕೌಂಟ್ ಹ್ಯಾಕ್ ಆಯ್ತು. ನನ್ನ ಅಕೌಂಟ್ನಿಂದ ಬೇರೆಯವರಿಗೆ ಅದೇ ರೀತಿ ಮೆಸೇಜ್ಗಳು ಹೋಗುತ್ತಿವೆ ಎಂದು ಗೊತ್ತಾಗುವುದಕ್ಕೆ ಸ್ವಲ್ಪ ಸಮಯವಾಯಿತು. ನನ್ನ ಯೂಸರ್ನೇಮ್ ಬದಲಾಗಿರಲಿಲ್ಲ. ತಕ್ಷಣವೇ ಸರಿಪಡಿಸಿಕೊಂಡೆ. ಯಾರೋ ಟರ್ಕಿಶ್ ಹ್ಯಾಕ್ ಮಾಡಿದ್ದರು. ನನ್ನ ಅಕೌಂಟ್ನಿಂದ ಕೆಲವು ಫೋಟೋಗಳು ಡಿಲೀಟ್ ಆಗಿವೆ. ಅದು ಬಿಟ್ಟು ಬೇರೆ ಸಮಸ್ಯೆ ಆಗಿಲ್ಲ’ ಎನ್ನುತ್ತಾರೆ ಮಾನ್ವಿತಾ.
ಆಶಿಕಾಗೆ ಹೀಗಾದಾಗ ಭಯವಾಯಿತಂತೆ. ‘ನಿಜಕ್ಕೂ ಭಯವಾಯಿತು. ಇನ್ನು ಮುಂದೆ ಬಹಳ ಹುಷಾರಾಗಿರಬೇಕು. ಈ ತರಹ ಸಂದೇಶಗಳು ಬಂದರೆ ನಂಬಬಾರದು. ಇದನ್ನೆಲ್ಲಾ ಯಾಕೆ ಮಾಡ್ತಾರೋ ಗೊತ್ತಿಲ್ಲ. ಆದರೆ, ನಾವು ನಮ್ಮ ಸೇಫ್ಟಿಯಲ್ಲಿ ಇರಬೇಕು ಅಂತ ಇದರಿಂದ ಬಹಳ ಚೆನ್ನಾಗಿ ಅರ್ಥವಾಯಿತು. ಗೊತ್ತಿಲ್ಲದ ಯಾವುದೇ ಮೆಸೇಜ್ಗಳನ್ನು ಕ್ಲಿಕ್ ಮಾಡಬೇಡಿ. ನಿಮ್ಮ ಹುಷಾರಿನಲ್ಲಿ ನೀವಿರಿ’ ಎಂದು ಸಲಹೆ ಕೊಡುತ್ತಾರೆ ಆಶಿಕಾ.
ಕೆಲವೇ ದಿನಗಳ ಹಿಂದೆ ನಟಿ ಪೂಜಾ ಹೆಗ್ಡೆಗೂ ಇದೇ ರೀತಿಯ ಅನುಭವವಾಗಿತ್ತು. ಯಾರೋ ಅವರ ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಮಾಡಿ, ತರಲೆ ಮಾಡಿದ್ದರು. ಸಮಂತಾ ಅಕ್ಕಿನೇನಿ ಫೋಟೋ ಹಾಕಿ, ‘ಐ ಡೋಂಟ್ ಫೈಂಡ್ ಹರ್ ಪ್ರೆಟ್ಟಿ ...’ ಎಂದು ಸಂದೇಶ ಹಾಕಿದ್ದರು. ಈ ವಿಷಯ ಮೊದಲು ಪೂಜಾ ಗಮನಕ್ಕೆ ಬಂದಿರಲಿಲ್ಲವಂತೆ. ಒಂದಿಷ್ಟು ಜನ ಗಮನಕ್ಕೆ ತಂದ ತಕ್ಷಣವೇ ಕಾರ್ಯಪ್ರವೃತ್ತರಾದ ಪೂಜಾ, ತಮ್ಮ ತಾಂತ್ರಿಕ ತಂಡದವರಿಗೆ ಇದನ್ನು ಸರಿಪಡಿಸುವ ಜವಾಬ್ದಾರಿ ಕೊಟ್ಟಿದ್ದಾರೆ. ಎರಡು ಗಂಟೆಗಳ ನಂತರ ಹ್ಯಾಕರ್ಗಳಿಂದ ಅಕೌಂಟ್ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತೀಚೆಗೆ ಹ್ಯಾಕಿಂಗ್ ಜಾಸ್ತಿಯಾಗಿದೆ ಎಂಬ ಸುದ್ದಿ ಕೇಳಿ, ಮೂರು ದಿನಗಳ ಹಿಂದಷ್ಟೇ ಅಮ್ಮ ಎಚ್ಚರಿಸಿದ್ದರು. ಓಕೆ ಅಂದ ನಾನೇ, ಈ ಸಮಸ್ಯೆ ಎದುರಿಸಬೇಕಾಯಿತು. | ಮಾನ್ವಿತಾ ಕಾಮತ್