ಡಿಸೆಂಬರ್​ನಲ್ಲಿ ಬಿಡುಗಡೆಯಾಗಲಿದೆ ಮಂಸೋರೆ ನಿರ್ದೇಶನದ ‘19.20.21’ ...

192021
Published on

ಬೆಂಗಳೂರು: ಮಂಸೋರೆ ನಿರ್ದೇಶನದಲ್ಲಿ '19.20.21' ಎಂಬ ಚಿತ್ರ ಮೂಡಿಬರುತ್ತಿರುವ ವಿಷಯ ಗೊತ್ತೇ ಇದೆ. ಕೆಲವು ತಿಂಗಳ ಹಿಂದೆಯೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಸಹ ಮುಕ್ತಾಯದ ಹಂತಕ್ಕೆ ಬಂದಿದೆ. ಚಿತ್ರವು ಡಿಸೆಂಬರ್​ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

ಹೌದು, ಮಂಸೋರೆ ನಿರ್ದೇಶನದ '19.20.21' ಚಿತ್ರವು ಇದೀಗ ಕೊನೆಯ ಹಂತ ತಲುಪಿದ್ದು, ಚಿತ್ರಕ್ಕೆ ಸೆನ್ಸಾರ್​ ಮಂಡಳಿಯ ಅನುಮತಿ ಸಿಗುತ್ತಿದ್ದಂತೆಯೇ ಅಧಿಕೃತ ಬಿಡುಗಡೆ ದಿನಾಂಕ ಘೋಷಿಸಲಾಗುತ್ತದೆ ಎಂದು ಮಂಸೋರೆ ಹೇಳಿಕೊಂಡಿದ್ದಾರೆ.

ಈಗಾಗಲೇ ಚಿತ್ರದ ಪೋಸ್ಟರ್​ಗಳು ಬಿಡುಗಡೆಯಾಗಿದ್ದು, ಮಂಸೋರೆ ಅವರ ಹಿಂದಿನ ಸಿನಿಮಾಗಳಂತೆ ಈ ಚಿತ್ರ ಕೂಡ ವಿಭಿನ್ನವಾಗಿರಲಿವೆ ಎಂಬ ಸುಳಿವನ್ನು ಪೋಸ್ಟರ್​ಗಳು ನೀಡಿವೆ. ನೈಜ ಘಟನೆಗಳನ್ನು ಆಧರಿಸಿ ಮಾಡಲಾದ ಈ ಚಿತ್ರವು ಸೋಶಿಯಲ್ ಥ್ರಿಲ್ಲರ್ ಜಾನರ್​ಗೆ ಸೇರಿದೆ.

ರಂಗಭೂಮಿ ಕಲಾವಿದ ಶೃಂಗ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದಲ್ಲಿ ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ಮಹದೇವ್ ಹಡಪದ್​, 'ಉಗ್ರಂ' ಸಂದೀಪ್ ಒಳಗೊಂಡ ಪ್ರತಿಭಾನ್ವಿತರ ತಾರಾಗಣ ಚಿತ್ರದಲ್ಲಿದೆ. ಯಲ್ಲಾಪುರ, ಧಾರವಾಡ, ಮಂಗಳೂರು, ಕುಂದಾಪುರ ಸೇರಿದಂತೆ ಹಲವು ಕಡೆ ಚಿತ್ರೀಕರಣ ಮಾಡಲಾಗಿದೆ.

ಶಿವು ಬಿ ಕೆ ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ, ಬಿಂದು ಮಾಲಿನಿ ಸಂಗೀತ ಇರುವ ಈ ಚಿತ್ರಕ್ಕೆ ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ ರಚಿಸಿದ್ದಾರೆ. 'ಆಕ್ಟ್​ 1978' ಮತ್ತು 'ಉದ್ಘರ್ಷ' ಚಿತ್ರಗಳನ್ನು ನಿರ್ಮಿಸಿದ್ದ ದೇವರಾಜ್ ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net