

ಬೆಂಗಳೂರು: 2006ರಲ್ಲಿ ಜಗ್ಗೇಶ್ ಅಭಿನಯದ ‘ಮಠ’ ಚಿತ್ರ ಬಿಡುಗಡೆಯಾಗಿ, ಯಶಸ್ಸು ಗಳಿಸಿತ್ತು. ಈಗ 16 ವರ್ಷಗಳ ಬಳಿಕ ಅದೇ ಹೆಸರಿನ ಮತ್ತೊಂದು ಚಿತ್ರ ಮೂಡಿಬರುತ್ತಿದೆ. ರವೀಂದ್ರ ವಂಶಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾಹಿತಿ ನೀಡುವ ಅವರು, ‘ಮಠಗಳಲ್ಲಿ ನಡೆದ ಸತ್ಯಘಟನೆಗಳನ್ನ ಆಧರಿಸಿದ ಚಿತ್ರವಿದು. ‘ಮಠ 2’, ‘ಗದ್ದುಗೆ’, ‘ಕಾವಿ’ ಅಂತ ಬೇರೆ ಶೀರ್ಷಿಕೆಗಳನ್ನೂ ಯೋಚಿಸಿದ್ದೆವು. ಆದರೆ ‘ಮಠ’ ಶೀರ್ಷಿಕೆ ಕಥೆಗೆ ಒಪ್ಪುತ್ತದೆ ಎಂದು ಅಂತಿಮಗೊಳಿಸಿದೆವು. ಚಿತ್ರವನ್ನು 25 ಜಿಲ್ಲೆಗಳ 200 ಮಠಗಳಿಗೆ ಭೇಟಿ ಕೊಟ್ಟು, 70 ಮಠಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಕಥೆ ಮಲೆಮಹದೇಶ್ವರ ಬೆಟ್ಟದಿಂದ ಶುರುವಾಗಿ ಬೀದರ್ನಲ್ಲಿ ಪೂರ್ಣಗೊಳ್ಳುತ್ತದೆ’ ಎಂದು ಹೇಳಿಕೊಳ್ಳುತ್ತಾರೆ.
ಮಠಗಳ ಕುರಿತು ಇರುವ ನಕಾರಾತ್ಮಕ ಆಲೋಚನೆಗಳನ್ನು ಹೋಗಲಾಡಿಸಿ, ಪಾಸಿಟಿವ್ ಯೋಚನೆ ಮೂಡಿಸುವುದು ಚಿತ್ರದ ಪ್ರಯತ್ನವಂತೆ. ‘ಆಕ್ಷನ್, ಲವ್, ಕಾಮಿಡಿ, ಹಾರರ್... ಹೀಗೆ ಸಿನಿಮಾಗಳಲ್ಲಿ ಹಲವು ಜಾನರ್ಗಳಿವೆ. ಆದರೆ, ‘ಮಠ’ ಕರ್ನಾಟಕದ ವಿಶೇಷತೆ, ಮಠಗಳ ಘನತೆ ತಿಳಿಹೇಳುವ, ಸಾಕ್ಷ್ಯಚಿತ್ರವೂ ಅಲ್ಲದ, ಚಲನಚಿತ್ರವೂ ಅಲ್ಲದ ವಿಭಿನ್ನ ಅನುಭವ ನೀಡುವ ಸಿನಿಮಾ. ಮನರಂಜನೆ ಜತೆ ಸಂದೇಶ ನೀಡುವ ಪ್ರಯತ್ನ ಮಾಡಿದ್ದೇವೆ’ ಎಂದು ಚಿತ್ರದ ಬಗ್ಗೆ ಮತ್ತಷ್ಟು ವಿಷಯ ಹಂಚಿಕೊಳ್ಳುತ್ತಾರೆ ರವೀಂದ್ರ ವಂಶಿ.
ಚಿತ್ರದಲ್ಲಿ ಸಾಧು ಕೋಕಿಲ, ಗುರುಪ್ರಸಾದ್, ಬಿರಾದಾರ್, ರಮೇಶ್ ಭಟ್, ಶರತ್ ಲೋಹಿತಾಶ್ವ, ರಾಜು ತಾಳಿಕೋಟೆ, ಸಂತೋಷ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ವಿಆರ್ ಕಂಬೈನ್ಸ್ ಬ್ಯಾನರ್ನಲ್ಲಿ ರಮೇಶ್ ನಿರ್ವಿುಸಿದ್ದಾರೆ.