

ಬೆಂಗಳೂರು: ‘ಆಕ್ಟ್ 1978’ ನಂತರ ‘ಅಬ್ಬಕ್ಕ’ ಚಿತ್ರ ಮಾಡುವುದಾಗಿ ಘೋಷಿಸಿದ್ದರು ನಿರ್ದೇಶಕ ಮಂಸೋರೆ. ಆದರೆ, ಆ ಚಿತ್ರ ಸದ್ಯಕ್ಕೆ ಸೆಟ್ಟೇರುವುದು ಸಂಶಯ ಎನ್ನುವಂತಿದೆ. ಮುಂದೆ ಸಮಯ ಬಂದಾಗ ಆ ಚಿತ್ರವನ್ನು ತೆರೆಯ ಮೇಲೆ ತರುವ ಕೆಲಸದಲ್ಲಿ ತೊಡಗಿಸಿಕೊಂಡರಾಯಿತು ಎಂದು ತೀರ್ವನಿಸಿರುವ ಮಂಸೋರೆ, ‘19.20.21’ ಎಂಬ ಹೊಸ ಚಿತ್ರವನ್ನು ಘೋಷಿಸಿದ್ದಾರೆ.
ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಮಂಸೋರೆ, ‘ಇದೊಂದು ದೊಡ್ಡ ಕ್ಯಾನ್ವಾಸ್ನ ಚಿತ್ರವಷ್ಟೇ ಅಲ್ಲ, ಸತ್ಯ ಘಟನೆ ಆಧಾರಿತ ಚಿತ್ರ. ಬಹಳ ಹಿಂದೆಯೇ ಆ ಘಟನೆಯನ್ನಾಧರಿಸಿ ಚಿತ್ರ ಮಾಡಬೇಕು ಅಂದುಕೊಂಡಿದ್ದೆ. ಈಗ ಕಾಲ ಕೂಡಿ ಬಂದಿದೆ. 19, 20, 21 ಎಲ್ಲರ ಬದುಕಿಗೂ ಬಹಳ ಮುಖ್ಯವಾದ ಸಂಖ್ಯೆಗಳು. ಅದು ಹೇಗೆ? ಏನು? ಎಂಬ ಕುತೂಹಲ ಸಿನಿಮಾ ನೋಡುವ ತನಕ ಇರಲಿ’ ಎನ್ನುತ್ತಾರೆ.
‘ಆಕ್ಟ್ 1978’ ತರಹವೇ ಇದೊಂದು ಬಹುತಾರಾಗಣದ ಸಿನಿಮಾ ಎನ್ನುವ ಅವರು, ‘ಈ ಚಿತ್ರದಲ್ಲಿ ರಂಗಭೂಮಿಯ ಹಲವು ಕಲಾವಿದರು ನಟಿಸುತ್ತಿದ್ದಾರೆ. ಕರ್ನಾಟಕದ ಬೇರೆಬೇರೆ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ. ನಾನು, ವೀರೇಂದ್ರ ಸೇರಿ ಕಥೆ ಬರೆಯುತ್ತಿದ್ದೇವೆ. ‘ಆಕ್ಟ್ 1978’ ಚಿತ್ರವನ್ನು ನಿರ್ವಿುಸಿದ ದೇವರಾಜ್ ಅವರೇ ಈ ಚಿತ್ರವನ್ನೂ ನಿರ್ವಿುಸುತ್ತಿದ್ದಾರೆ. ಸತ್ಯ ಹೆಗಡೆ ಈ ಚಿತ್ರಕ್ಕೂ ಛಾಯಾಗ್ರಾಹಕರಾಗಿರಲಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ. ‘192021’ ಚಿತ್ರವು ಮಾರ್ಚ್ನಲ್ಲಿ ಶುರುವಾಗಿ, ನವೆಂಬರ್ನಲ್ಲಿ ಬಿಡುಗಡೆಯಾಗಲಿದೆಯಂತೆ.