ಹೊಸ ದಿಶಾ: ಎಸ್​ಎಲ್​ವಿ ಮೂಲಕ ಮಂಡ್ಯ ರಮೇಶ್ ಮಗಳ ಎಂಟ್ರಿ...

Disha
Published on

ಬೆಂಗಳೂರು: ಐದು ವರ್ಷಗಳ ಹಿಂದೆ ಬಿಡುಗಡೆಯಾದ ‘ದೇವರ ನಾಡಲ್ಲಿ’ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು ಮಂಡ್ಯ ರಮೇಶ್ ಮಗಳು ದಿಶಾ ರಮೇಶ್. ಅವರ ಅಭಿನಯದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದರೂ, ಅದ್ಯಾಕೋ ಇನ್ನೊಂದು ಚಿತ್ರದಲ್ಲಿ ದಿಶಾ ಹೆಸರು ಕಾಣಲಿಲ್ಲ. ಇದೀಗ, ಐದು ವರ್ಷಗಳ ನಂತರ ‘ಎಸ್​ಎಲ್​ವಿ’ ಎಂಬ ಚಿತ್ರದ ಮೂಲಕ ರೀಎಂಟ್ರಿ ಕೊಟ್ಟಿದ್ದಾರೆ. ‘ಎಸ್​ಎಲ್​ವಿ’ ಎಂದರೆ, ಮೊದಲು ಆ ಹೆಸರಿನ ಹೋಟೆಲ್ ಗಮನಕ್ಕೆ ಬರಬಹುದು. ಅಲ್ಲಿನ ಸ್ಪೆಷಾಲಿಟಿಯಾದ ಇಡ್ಲಿ-ಚಟ್ನಿ ನೆನಪಾಗಬಹುದು. ಆದರೆ, ಇಲ್ಲಿ ‘ಎಸ್​ಎಲ್​ವಿ’ ಎಂದರೆ ಸಿರಿ ಲಂಬೋದರ ವಿವಾಹ ಎಂದರ್ಥ.

ಹೆಸರು ಕೇಳಿದರೆ ಇದು ಯಾವ ಜಾನರ್ ಚಿತ್ರ ಎಂದು ಗೊತ್ತಾಗುತ್ತದೆ. ದಿವಂಗತ ಸಂಜೀವ್ ಕುಲಕರ್ಣಿ ಅವರ ಮಗ ಸೌರಭ್ ಕುಲಕರ್ಣಿ ಈ ಚಿತ್ರವನ್ನು ನಿರ್ದೇಶಿಸಿದರೆ, ಅಂಜನ್ ಭಾರದ್ವಾಜ್ ಹಾಗೂ ದಿಶಾ ರಮೇಶ್ ನಾಯಕ-ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ರಾಜೇಶ್ ನಟರಂಗ, ಸುಂದರ್ ವೀಣಾ, ಹರೀಶ್ ಪ್ರಭಾತ್ ಮುಂತಾದವರು ನಟಿಸುತ್ತಿದ್ದು, ಶನಿವಾರ ಮುಹೂರ್ತವಾಗಿದೆ. ಈ ಕುರಿತು ಮಾತನಾಡುವ ದಿಶಾ, ‘ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದೆ ಮತ್ತು ಸೌರಭ್ ಹೇಳಿದ ಕಥೆ ಕೇಳಿ ಖುಷಿಯಿಂದ ಒಪ್ಪಿಕೊಂಡೆ. ಈ ಚಿತ್ರದಿಂದ ತುಂಬಾ ಕಲಿಯುವುದಕ್ಕೆ ಸಿಗುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net