

ಬೆಂಗಳೂರು: ಎರಡು ವರ್ಷವೇ ಆಗಿತ್ತು ಅತುಲ್ ಕುಲಕಣರ್ಣಿ ಅಭಿನಯದ ಕನ್ನಡ ಚಿತ್ರವೊಂದು ಬಡುಗಡೆಯಾಗಿ. 'ಅಳಿದುಳಿದವರು' ಎಂಬ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಅತುಲ್ ಕುಲಕರ್ಣಿ, ಈಗ ಸದ್ದಿಲ್ಲದೆ 'ಮನಸ್ಮಿತ' ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಎ2 ಮ್ಯೂಸಿಕ್ ಚಾನಲ್ನಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಚಿತ್ರ ಜೂನ್ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ: ಧಾರಾಕಾರ ಸಿನಿ ಮಳೆ: ಥಿಯೇಟರ್ನಲ್ಲೂ ಮೋಡ ಕವಿದ ವಾತಾವರಣ
'ಮನಸ್ಮಿತ' ಎಂಬ ಹೆಸರೇ ಹೇಳುವಂತೆ ಮನಸ್ಸು ಮತ್ತು ನಗುವಿನ ಕುರಿತ ಚಿತ್ರ ಇದು. ಮಡಿಕೇರಿ ಮೂಲಕ ಅಪ್ಪಣ್ಣ ಸಂತೋಷ್ ಕಥೆ, ಚಿತ್ರಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಅವರ ತಾಯಿ ಸೀತಮ್ಮ ವಿ.ಟಿ, ಜಮುನಾ ಪ್ರೊಡಕ್ಷನ್ಸ್ನಡಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಇನ್ನು, ಅವರ ಪತ್ನಿ ದೀಪಿಕಾ ವಿ.ಎ ಈ ಚಿತ್ರದ ಸಹನಿರ್ಮಾಪಕರಾಗಿದ್ದಾರೆ.
ಸಂತೋಷ್ ಹೇಳುವಂತೆ ಇದು ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆಯಂತೆ. ಮೊದಲ ಕಾಲಘಟ್ಟದಲ್ಲಿ ಅತುಲ್ ಕುಲಕರ್ಣಿ ಮತ್ತು ಪಲ್ಲವಿ ಪುರೋಹಿತ್ ನಾಯಕ-ನಾಯಕಿಯಾಗಿ ಅಭಿನಯಿಸಿದರೆ, ಇನ್ನೊಂದು ಕಾಲಘಟ್ಟದಲ್ಲಿ ಚರಣ್ ಗೌಡ ಮತ್ತು ಸಂಜನಾ ದಾಸ್ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಸೆಂಟಿಮೆಂಟ್ ಅಲ್ಲದೆ ಹಾರರ್ ಅಶುಗಳು ಸಹ ಇವೆ.
'ಹುಡುಗಿಯ ಪ್ರೀತಿಯನ್ನು ಪಡೆಯಲು ನಾಯಕ ಹೇಗೆ ತನ್ನನ್ನು ಸಮರ್ಪಿಸಿಕೊಳ್ಳುತ್ತಾನೆ. ಕುಟುಂಬದಲ್ಲಿ ಆದ ನೋವು, ಕೆಟ್ಟದಾಗಿರುವುದನ್ನು ಹೋಗಲಾಡಿಸಲು ಯಾವ ರೀತಿ ಹೋರಾಡುತ್ತಾನೆ ಎಂಬುದನ್ನು ಮನರಂಜನಾತ್ಮಕವಾಗಿ ತೋರಿಸಲಾಗಿದೆ. ಚಿತ್ರದಲ್ಲಿ ಸಂಗೀತ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಹರಿ ಕಾವ್ಯ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಪೈಕಿ ಶಂಕರ್ ಮಹದೇವನ್ ಅವರು 'ಮನಮಂದಿರದಿ ನೆಲೆಸು ಬಾ' ಎಂಬ ಹಾಡನ್ನು ಹಾಡಿದ್ದು, ಆ ಹಾಡು ಅವರಿಗೆ ಬಹಳ ಇಷ್ಟವಾಗಿದೆ. ಈ ಹಾಡನ್ನು ಪ್ರತಿಯೊಬ್ಬರೂ ಕೇಳಬೇಕು ಎಂದು ಅವರೇ ಇನ್ಸ್ಟಾಗ್ರಾಂನಲ್ಲಿ ಹಾಡನ್ನು ಶೇರ್ ಮಾಡಿಕೊಂಡಿದ್ದಾರೆ' ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಸಂತೋಷ್.
'ಮನಸ್ಮಿತ' ಚಿತ್ರದಲ್ಲಿ ಅತುಲ್ ಕುಲಕರ್ಣಿ, ಪಲ್ಲವಿ ಪುರೋಹಿತ್, ಚರಣ್ ಗೌಡ, ಸಂಜನಾ ದಾಸ್ ಜತೆಗೆ ರಾಜೇಂದ್ರ ಕಾರಂತ್, ಸುಚೇಂದ್ರ ಪ್ರಸಾದ್, ಮೂಗು ಸುರೇಶ್, ಕರಿಸುಬ್ಬು, ವೀಣಾ ಪೊನ್ನಪ್ಪ, ಪ್ರದೀಪ್ ಶಾಸ್ತ್ರೀ, ಪ್ರದೀಪ್ ಪೂಜಾರಿ ಮುಂತಾದವರು ನಟಿಸಿದ್ದಾರೆ. ಕೆ. ಕಲ್ಯಾಣ್, ಹರಿಕಾವ್ಯ ಮತ್ತು ಮಂಜು ಎಂ. ದೊಡ್ಡಮನಿ ಹಾಡುಗಳನ್ನು ರಚಿಸಿದ್ದಾರೆ. ಕೆ.ಎಸ್. ಚಂದ್ರಶೇಖರ್ ಅವರ ಛಾಯಾಗ್ರಹಣವಿರುವ ಈ ಚಿತ್ರವನ್ನು ಬೆಂಗಳೂರು, ಕೊಡಗು, ಮರಳವಾಗಿ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ.