'ಮನಸ್ಮಿತ' ಈ ವಾರ ಬಿಡುಗಡೆ; ಇದು ಮನಸ್ಸು ಮತ್ತು ನಗುವಿನ ಕುರಿತ ಚಿತ್ರ

Manasmita - Final
Published on

ಬೆಂಗಳೂರು: ಈ ಶುಕ್ರವಾರ (ಜೂನ್​ 03) ಕನ್ನಡದ ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಈ ಪೈಕಿ ಅಪ್ಪಣ್ಣ ಸಂತೋಷ್​ ನಿರ್ದೇಶನದ 'ಮನಸ್ಮಿತ' ಸಹ ಒಂದು. ಇದೊಂದು ಸಂಗೀತಮಯ ಪ್ರೇಮಕಥೆಯಾಗಿದ್ದು, ಚಿತ್ರದಲ್ಲಿ ಹಾರರ್​ ಅಂಶವೂ ಇದೆ. ಅಷ್ಟೇ ಅಲ್ಲ, ಸಾಕಷ್ಟು ಸೆಂಟಿಮೆಂಟ್​ ವಿಷಯಗಳು ಸಹ ಇವೆ.

'ಮನಸ್ಮಿತ' ಚಿತ್ರವು ಬೆಂಗಳೂರಿನ ಪ್ರಸನ್ನ, ನವರಂಗ್​, ಕಾಮಾಕ್ಯ ಸೇರಿದಂತೆ ರಾಜ್ಯಾದ್ಯಂತ 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಮಾರ್ಸ್​ ಸುರೇಶ್​ ವಿತರಿಸುತ್ತಿದ್ದು, ಈಗಾಗಲೇ ಬುಕ್​ ಮೈ ಶೋನಲ್ಲಿ ಬುಕ್ಕಿಂಗ್​ ಸಹ ಪ್ರಾರಂಭವಾಗಿದೆ.

'ಮನಸ್ಮಿತ' ಎಂಬ ಹೆಸರೇ ಹೇಳುವಂತೆ ಮನಸ್ಸು ಮತ್ತು ನಗುವಿನ ಕುರಿತ ಚಿತ್ರ ಇದು. ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದ್ದು, ಹುಡುಗಿಯ ಪ್ರೀತಿಯನ್ನು ಪಡೆಯಲು ನಾಯಕ ಹೇಗೆ ತನ್ನನ್ನು ಸಮರ್ಪಿಸಿಕೊಳ್ಳುತ್ತಾನೆ ಎಂಬುದು ಈ ಚಿತ್ರದ ಕಥೆಯಂತೆ. ತನ್ನ ಕುಟುಂಬದಲ್ಲಿ ಆದ ಸಮಸ್ಯೆಗಳನ್ನು ಹೋಗಲಾಡಿಸಲು ಯಾವ ರೀತಿ ಹೋರಾಡುತ್ತಾನೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆಯಂತೆ.

ಮೊದಲ ಕಾಲಘಟ್ಟದಲ್ಲಿ ಅತುಲ್​ ಕುಲಕರ್ಣಿ ಮತ್ತು ಪಲ್ಲವಿ ಪುರೋಹಿತ್​ ನಾಯಕ-ನಾಯಕಿಯಾಗಿ ಅಭಿನಯಿಸಿದರೆ, ಇನ್ನೊಂದು ಕಾಲಘಟ್ಟದಲ್ಲಿ ಚರಣ್​ ಗೌಡ ಮತ್ತು ಸಂಜನಾ ದಾಸ್​ ನಾಯಕ-ನಾಯಕಿಯಾಗಿ ನಟಿಸಿದ್ದಾರೆ.

ಅಪ್ಪಣ್ಣ ಸಂತೋಷ್​ ಈ ಚಿತ್ರವನ್ನು ನಿರ್ದೇಶಿಸಿರುವುದಷ್ಟೇ ಅಲ್ಲ, ಕಥೆ, ಚಿತ್ರಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಅವರ ತಾಯಿ ಸೀತಮ್ಮ ವಿ.ಟಿ, ಜಮುನಾ ಪ್ರೊಡಕ್ಷನ್ಸ್​​ನಡಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಇನ್ನು, ಅವರ ಪತ್ನಿ ದೀಪಿಕಾ ವಿ.ಎ ಈ ಚಿತ್ರದ ಸಹನಿರ್ಮಾಪಕರಾಗಿದ್ದಾರೆ.

'ಮನಸ್ಮಿತ' ಚಿತ್ರದಲ್ಲಿ ಸಂಗೀತ ಬಹಳ ಪ್ರಮುಖ ಪಾತ್ರ ವಹಿಸಲಿದ್ದು, ಹರಿ ಕಾವ್ಯ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಅತುಲ್​ ಕುಲಕರ್ಣಿ, ಪಲ್ಲವಿ ಪುರೋಹಿತ್​, ಚರಣ್​ ಗೌಡ, ಸಂಜನಾ ದಾಸ್​ ಜತೆಗೆ ರಾಜೇಂದ್ರ ಕಾರಂತ್, ಸುಚೇಂದ್ರ ಪ್ರಸಾದ್, ಮೂಗು ಸುರೇಶ್, ಕರಿಸುಬ್ಬು, ವೀಣಾ ಪೊನ್ನಪ್ಪ, ಪ್ರದೀಪ್‌ ಶಾಸ್ತ್ರೀ, ಪ್ರದೀಪ್‌ ಪೂಜಾರಿ ಮುಂತಾದವರು ನಟಿಸಿದ್ದಾರೆ. ಕೆ.ಎಸ್​. ಚಂದ್ರಶೇಖರ್​ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net