ಸತ್ಯನ ಹೊಸ ಎಸೆತ; ಯಾರಾಗ್ತಾರೆ ಮ್ಯಾನ್ ಆಫ್ ದಿ ಮ್ಯಾಚ್ ?

Sathya
Published on

ಬೆಂಗಳೂರು: ‘ಇದು ಸ್ಪೋರ್ಟ್ಸ್ ಚಿತ್ರ ಅಲ್ಲ ...’ ಹಾಗಂತ ಮೊದಲೇ ಹೇಳಿಬಿಟ್ಟರು ನಿರ್ದೇಶಕ ಸತ್ಯಪ್ರಕಾಶ್. ಅವರಿಗೆ ಗೊತ್ತು, ಚಿತ್ರಕ್ಕೆ ‘ಮ್ಯಾನ್ ಆಫ್ ದಿ ಮ್ಯಾಚ್’ ಎಂಬ ಹೆಸರಿಟ್ಟ ಮೇಲೆ, ಇದೊಂದು ಕ್ರೀಡೆಯ ಕುರಿತಾದ ಚಿತ್ರ ಎಂದು ಎಲ್ಲರೂ ತೀರ್ಮಾನಕ್ಕೆ ಬಂದುಬಿಡುತ್ತಾರೆ ಎಂದು. ಹಾಗಾಗಿ, ಇದು ಕ್ರೀಡಾಚಿತ್ರ ಅಲ್ಲ ಎನ್ನುವುದರ ಜತೆಗೆ ತಮ್ಮ ಮಾತಿಗೆ ವಿವರಣೆಯನ್ನೂ ಅವರು ಕೊಟ್ಟರು. ಇದೆಲ್ಲ ಆಗಿದ್ದು ಅವರದೇ ನಿರ್ದೇಶನದ ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರದ ಮುಹೂರ್ತ ಸಮಾರಂಭದಲ್ಲಿ. ಆಗಷ್ಟೇ ಹಂಸಲೇಖ, ಧನಂಜಯ, ಉಮಾಪತಿ ಶ್ರೀನಿವಾಸ್ ಗೌಡ ಸೇರಿ ಹಲವು ಗಣ್ಯರು ಮುಹೂರ್ತ ಸಮಾರಂಭಕ್ಕೆ ಬಂದು ಚಿತ್ರತಂಡವನ್ನು ಶುಭಹಾರೈಸಿ ಹೋಗಿದ್ದರು. ಅವರನ್ನು ಬೀಳ್ಕೊಟ್ಟು ಬಂದು ಮಾತಿಗೆ ಕುಳಿತ ಸತ್ಯಪ್ರಕಾಶ್, ‘ಪ್ರತಿದಿನ ಒಬ್ಬೊಬ್ಬರಿಗೆ ಒಂದೊಂದು ಮ್ಯಾಚ್ ಇದ್ದಂತೆ. ದಿನದ ಅಂತ್ಯದಲ್ಲಿ ಸೋಲೋ, ಗೆಲುವೋ ಎಂಬುದು ನಿರ್ಧಾರವಾಗುತ್ತದೆ. ಅದೇ ತರಹ ಇಲ್ಲೂ ಕೆಲವು ಪಾತ್ರಗಳಿಗೆ ಆ ದಿನ ಬಹಳ ಮುಖ್ಯ. ದಿನದ ಅಂತ್ಯದಲ್ಲಿ ಮನುಷ್ಯ ಗೆಲ್ಲುತ್ತಾನೋ, ಅವನ ತತ್ವ ಗೆಲ್ಲುತ್ತದೋ ಎನ್ನುವುದು ಮುಖ್ಯ’ ಎನ್ನುತ್ತಾರೆ ಸತ್ಯಪ್ರಕಾಶ್.

ಇದೊಂದು ಸಿನಿಮಾ ಕುರಿತಾದ ಚಿತ್ರವಾಗಿದ್ದು, ಆಡಿಷನ್ ಸುತ್ತ ಸುತ್ತುತ್ತದಂತೆ. ವಿಶೇಷವೆಂದರೆ, ಒಂದೇ ದಿನದಲ್ಲಿ ಚಿತ್ರ ಕಥೆ ನಡೆಯಲಿದ್ದು, ಒಂದೇ ಜಾಗದಲ್ಲಿ ಚಿತ್ರೀಕರಣ ನಡೆಯುತ್ತದಂತೆ. ‘ರಾಮಾ ರಾಮಾ ರೇ’ ಚಿತ್ರತಂಡದ ಬಹಳಷ್ಟು ಸದಸ್ಯರು ಇಲ್ಲೂ ಮುಂದುವರೆಯಲಿದ್ದು, ನಟರಾಜ್, ಧರ್ಮಣ್ಣ ಮುಂತಾದವರು ಪ್ರಮುಖ ಪಾತ್ರವಹಿಸಲಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರಕ್ಕೆ ಕೆಲಸ ಮಾಡಿದ್ದ ಛಾಯಾಗ್ರಾಹಕ ಲವಿತ್ ಮತ್ತು ಸಂಗೀತ ನಿರ್ದೇಶಕ ವಾಸುಕಿ ವೈಭವ್ ಇಲ್ಲೂ ಮುಂದುವರೆದಿದ್ದಾರೆ. ಏಪ್ರಿಲ್​ನಲ್ಲಿ ಚಿತ್ರೀಕರಣ ಶುರುವಾಗಲಿದ್ದು, ಈ ಚಿತ್ರವನ್ನು ಸತ್ಯಪ್ರಕಾಶ್ ಮತ್ತು ಮಂಜುನಾಥ್ ಜತೆಯಾಗಿ ಸೇರಿ ನಿರ್ವಿುಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net