ಬಿಡುಗಡೆಗೂ ಮುನ್ನ ವಸಿಷ್ಟ 'ಕಾಲಚಕ್ರ' ಚಿತ್ರದ ರಿಮೇಕ್​ ಹಕ್ಕು ಮಾರಾಟ

va
Published on

ಬೆಂಗಳೂರು: ವಸಿಷ್ಠ ಎನ್ ಸಿಂಹ ನಾಯಕರಾಗಿ ಅಭಿನಯಿಸಿರುವ 'ಕಾಲಚಕ್ರ' ಚಿತ್ರ ಮಲಯಾಳಂನಲ್ಲೂ ನಿರ್ಮಾಣವಾಗುತ್ತಿದೆ. 'ಕಾಲಚಕ್ರ' ಚಿತ್ರದ ರಿಮೇಕ್ ಹಕ್ಕು ಮಲಯಾಳಂ ಭಾಷೆಗೆ ಮಾರಾಟವಾಗುತ್ತಿದೆ.

ಮಲಯಾಳಂ ಚಿತ್ರರಂಗದ ಖ್ಯಾತ ನಿರ್ಮಾಪಕರೊಬ್ಬರು 'ಕಾಲಚಕ್ರ' ಚಿತ್ರದ ಕಥೆ ಇಷ್ಟಪಟ್ಟು ಮಲಯಾಳಂ ನಲ್ಲಿ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಮಲೆಯಾಳಂ ನಲ್ಲಿ ಚಿತ್ರ ನಿರ್ಮಿಸುತ್ತಿರುವ ಸಂಸ್ಥೆ ಯಾವುದು? ಯಾವಾಗ ಪ್ರಾರಂಭವಾಗುತ್ತದೆ? ಯಾರು ಅಭಿನಯಿಸುತ್ತಾರೆ ಎಂಬ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.

ಅಕ್ಟೋಬರ್ 19ರಂದು ವಸಿಷ್ಠ ಸಿಂಹ ಅವರ ಹುಟ್ಟುಹಬ್ಬ. ಆವತ್ತು ಈ ಬಗ್ಗೆ ಒಂದಷ್ಟು ಮಾಹಿತಿಯನ್ನು ಚಿತ್ರತಂಡ ಬಹಿರಂಗಪಡಿಸಲಿದೆ. ವಸಿಷ್ಠ ಸಿಂಹ ನಾಲ್ಕು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರದ ಟೀಸರ್ ಹಾಗೂ ಹಾಡುಗಳಿಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯದಲ್ಲೇ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ರಶ್ಮಿ ಫಿಲಂಸ್ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗಿದ್ದು, ಸುಮಂತ್ ಕ್ರಾಂತಿ ನಿರ್ಮಾಣ ರಚನೆ ಹಾಗೂ ನಿರ್ದೇಶನ ಮಾಡಿದ್ದಾರೆ. ಗುರುಕಿರಣ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಚೇತನ್ ಕುಮಾರ್, ಕವಿರಾಜ್, ಸಂತೋಷ್ ನಾಯಕ್ ಬರೆದಿದ್ದಾರೆ. ಸಂಚಿತ್ ಹೆಗ್ಡೆ, ಕೈಲಾಶ್​ ಖೇರ್, ಪಂಚಮ್ ಜೀವ ಹಾಡಿದ್ದಾರೆ.

ಎಲ್. ಎಂ. ಸೂರಿ ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ, ಡಿಫರೆಂಟ್ ಡ್ಯಾನಿ‌ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ, ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ವಸಿಷ್ಠ ಎನ್ ಸಿಂಹ, ರಕ್ಷ, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net