'ಸಂಪ್ರದಾಯ ಇಲ್ಲದಿದ್ದರೂ ಸಂಭ್ರಮ ಇದೆ' ಎನ್ನುತ್ತಿದ್ದಾರೆ ರಚಿತಾ ರಾಮ್​

Rachita Ram
Published on

ನವರಾತ್ರಿ ಅಂದ ತಕ್ಷಣ ಮೈಸೂರು ನೆನಪಾಗುತ್ತೆ. ಅಂಬಾರಿ, ಆ ರಾಜವೈಭವ ನೆನಪಿಗೆ ಬರುತ್ತೆ. ಎಷ್ಟೇ ಆದರೂ ನಾಡಹಬ್ಬ ಅಲ್ವ? ಇನ್ನು ನಮ್ಮ ಮನೆಯಲ್ಲಿ ನವರಾತ್ರಿ ಸಂಭ್ರಮ ಕಡಿಮೆ ಎಂಬುದಕ್ಕಿಂತ ಗೊಂಬೆಯನ್ನು ಕೂರಿಸುವ ಸಂಪ್ರದಾಯ ಇಲ್ಲ. ನಮ್ಮ ಮನೆಯಲ್ಲೂ ಗೊಂಬೆ ಕೂರಿಸೋಣ ಎಂದು ಅಮ್ಮನಿಗೆ ಹೇಳಿದ್ದೆ.

ಮೊದಲಿನಿಂದ ಆ ಸಂಪ್ರದಾಯ ಇಲ್ಲ ಎಂಬ ಕಾರಣಕ್ಕೆ ಕೂರಿಸುವುದಿಲ್ಲ. ಇದನ್ನು ಹೊರತುಪಡಿಸಿದರೆ ಒಂದಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಮನೆಯಲ್ಲಿನ ಎಲ್ಲರೂ ಆಚರಿಸುತ್ತೇವೆ. ಒಂಬತ್ತು ದಿನಗಳ ಕಾಲ ಮನೆಯಲ್ಲಿ ಮಾಂಸಾಹಾರ ಸೇವನೆ ಇರಲ್ಲ. ಪ್ರತಿ ದಿನ ದುರ್ಗಾ ಪೂಜೆ ನೆರವೇರಿಸಲಾಗುತ್ತದೆ. ವಿಶೇಷ ಅಲಂಕಾರ, ನೈವೇದ್ಯ ಎಲ್ಲವೂ ಇರುತ್ತೆ. ಅದರಲ್ಲೂ ಶುಕ್ರವಾರ ಮತ್ತು ಮಂಗಳವಾರ ಉಳಿದ ದಿನಕ್ಕಿಂತ ಚೂರು ಹೆಚ್ಚೇ ಸಂಭ್ರಮ ಸಡಗರದ ಆಚರಣೆ ಇರುತ್ತದೆ. ಆಯುಧಪೂಜೆ ದಿನ ಮನೆಯಲ್ಲಿನ ವಾಹನಗಳ ಪೂಜೆ ಮಾಡಲಾಗುತ್ತದೆ. ನವರಾತ್ರಿ ದಿನ 24 ಗಂಟೆ ಕಾಲ ದೀಪ ಹಚ್ಚುವ ಸಂಪ್ರದಾಯ ನಮ್ಮ ಮನೆಯಲ್ಲಿದೆ. ಎಂದಿನಂತೆ ಹಬ್ಬದೂಟ, ಸ್ನೇಹಿತರ ಮನೆಗಳಿಗೆ ಭೇಟಿ ಇದ್ದೇ ಇರುತ್ತದೆ. ವಿಶೇಷ ಏನೆಂದರೆ, ಕಳೆದ ಮೂರು ವರ್ಷಗಳಿಂದ ಸ್ನೇಹಿತರ ಜತೆಗೂಡಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದೇವೆ. ಈ ವರ್ಷವೂ ಅದು ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಬನಶಂಕರಿ ದೇವಸ್ಥಾನಕ್ಕೆ ಹೋಗಿ ಅರ್ಚನೆ ಮಾಡಿಸಿಕೊಂಡು ಬರುತ್ತೇವೆ.

| ರಚಿತಾ ರಾಮ್ ನಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net