

ಮುಂಬೈ: ಲಿಜೋ ಜೋಸ್ ಪೆಲ್ಲಿಸ್ಸೆರಿ ನಿರ್ದೇಶನದ ಮಲಯಾಳಂ ಚಿತ್ರ 'ಜಲ್ಲಿಕಟ್ಟು' 93ನೇ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ನಾಮನಿರ್ದೇಶನವಾಗಿದೆ.
2021ರ ಫೆಬ್ರವರಿಯಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಈ ಪೈಕಿ ಅತ್ಯುತ್ತಮ ಫಾರಿನ್ ಚಿತ್ರ ಪ್ರಶಸ್ತಿಗೆ ಜಗತ್ತಿನ ಹಲವು ದೇಶಗಳಿಂದ ಚಿತ್ರಗಳು ನಾಮನಿರ್ದೇಶನವಾಗುತ್ತವೆ. ಈ ಬಾರಿ, ಭಾರತದಿಂದ 27 ಚಿತ್ರಗಳು ಪೈಪೋಟಿ ನಡೆಸಿದ್ದು, ಈ ಪೈಕಿ 'ಜಲ್ಲಿಕಟ್ಟು' ಚಿತ್ರಕ್ಕೆ ಭಾರತವನ್ನು ಪ್ರತಿನಿಧಿಸುವ ಅಪರೂಪದ ಅವಕಾಶ ಸಿಕ್ಕಿದೆ.
ಈ ಬಾರಿ ಕಣದಲ್ಲಿದ್ದ 27 ಚಿತ್ರಗಳ ಪೈಕಿ ಹಿಂದಿ ಚಿತ್ರಗಳೇ ಹೆಚ್ಚಿದ್ದವು. ಇನ್ನು ಮರಾಠಿ, ಮಲಯಾಳಂ ಚಿತ್ರರಂಗದಿಂದಲೂ ಕೆಲವು ಚಿತ್ರಗಳು ಪೈಪೋಟಿ ನಡೆಸಿದ್ದವು. ಈ ಪೈಕಿ ತೀರ್ಪುಗಾರರ ಮೆಚ್ಚಿನ ಚಿತ್ರವಾಗಿ 'ಜಲ್ಲಿಕಟ್ಟು' ಹೊರಹೊಮ್ಮಿದ್ದು, ಮನುಷ್ಯರು ಪ್ರಾಣಿಗಳಿಗಿಂಥ ಕೆಟ್ಟವರು ಎಂದು ಸಾರುವ ಅಪರೂಪದ ಚಿತ್ರ ನಮ್ಮೆಲ್ಲರ ಆಯ್ಕೆಯಾಗಿದೆ ಎಂದು ತೀರ್ಪುಗಾರ ಮಂಡಳಿಯ ಅಧ್ಯಕ್ಷ ರಾಹುಲ್ ರವೈಲ್ ಹೇಳಿಕೊಂಡಿದ್ದಾರೆ.
ಈ ಬಾರಿ ಕಣದಲ್ಲಿ ಹಿಂದಿಯಿಂದ 'ಚಪಾಕ್', 'ಶಕುಂತಲಾ ದೇವಿ', 'ಚಲಾಂಗ್', 'ಗುಲಾಬೋ ಸಿತಾಬೋ', 'ದಿ ಸ್ಕೈ ಈಸ್ ಪಿಂಕ್', 'ಬುಲ್ಬುಲ್' ಮುಂತಾದ ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಅವೆಲ್ಲವನ್ನು ಹಿಂದಿಕ್ಕಿ, 'ಜಲ್ಲಿಕಟ್ಟು' ಆಯ್ಕೆಯಾಗಿರುವುದು ವಿಶೇಷ.
ಈ ಬಾರಿಯ ಆಯ್ಕೆಗೆ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಆಸ್ಕರ್ನಲ್ಲಿ ಸ್ಪರ್ಧಿಸುವುದಕ್ಕೆ ಭಾರತದಿಂದ ಇದು ಅರ್ಹವಾದ ಚಿತ್ರ ಎಂಬ ಮೆಚ್ಚುಗೆ ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ಕಳೆದ ವರ್ಷ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದ 'ದಿ ಗಲ್ಲಿ ಬಾಯ್' ಚಿತ್ರವು ಭಾರತದಿಂದ ನಾಮನಿರ್ದೇಶನಗೊಂಡಿದ್ದು, ಈ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.