

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸಿನಿಮಾ ನಿರ್ಮಾಣದ ಹೊರೆ, ನಿರ್ಮಾಪಕರಿಗೆ ಬರೆಯಾಗಿ ಪರಿಣಮಿಸಿದೆ. ನಿರ್ಮಾಣ ವೆಚ್ಚ, ಕಲಾವಿದರ ಸಂಭಾವನೆ ಹೆಚ್ಚುತ್ತಿದ್ದು, ಟಿಕೆಟ್ ಮೇಲಿನದ ದುಪ್ಪಟ್ಟು ತೆರಿಗೆ ನಿರ್ಮಾಪಕರನ್ನು ನಷ್ಟದ ಜತೆಗೆ ಸಂಕಷ್ಟಕ್ಕೆ ದೂಡುತ್ತಿದೆ ಎಂದು ಮಲಯಾಳಂ ಸಿನಿಮಾ ನಿರ್ಮಾಪಕರು ಕಳೆದ ಫೆಬ್ರವರಿಯಲ್ಲಿ ಸಭೆ ನಡೆಸಿದ್ದರು. ಆಗಿನಿಂದಲೂ ಪ್ರತಿ ತಿಂಗಳು ಬಿಡುಗಡೆಯಾಗುತ್ತಿರುವ ಚಿತ್ರಗಳು, ಅವುಗಳ ಬಜೆಟ್ ಹಾಗೂ ಗಳಿಕೆಯನ್ನು ದಾಖಲೆ ಸಮೇತ ರಿಲೀಸ್, ನಿರ್ಮಾಪಕರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಮಾಹಿತಿ ನೀಡುತ್ತಿದ್ದಾರೆ.
ಹಾಗೇ ಕೇರಳ ಸಿನಿಮಾ ನಿರ್ಮಾಪಕರು, ಪ್ರದರ್ಶಕರು, ವಿತರಕರು ಹಾಗೂ ಕಾರ್ಮಿಕರ ಒಕ್ಕೂಟ ಸದಸ್ಯರು ಕೇರಳ ಸಿಎಂ ಪಿಣರಾಯಿ ವಿಜಯನ್ ಬಳಿ ಮನವಿ ಸಲ್ಲಿಸಲು ತೀರ್ಮಾನಿಸಿದ್ದು, ಜೂ. 1ರಿಂದ ಕೇರಳ ಚಿತ್ರರಂಗ ಬಂದ್ಗೆ ಕರೆನೀಡಿದ್ದರು. ಇದೀಗ ಈ ಬಂದ್ ಬಿಸಿ ದಣದ ಮತ್ತೆರಡು ರಾಜ್ಯಗಳಿಗೂ ಮುಟ್ಟಿದೆ!
ಕೇರಳದಲ್ಲಿ ಚಿತ್ರರಂಗ ಬಂದ್ಗೆ ಕರೆ ನೀಡಿರುವ ಬೆನ್ನಲ್ಲೇ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲೂ ಜೂ. 1ರಿಂದ ಪ್ರದರ್ಶಕರು ಥಿಯೇಟರ್ಗಳನ್ನು ಬಂದ್ ಮಾಡಲು ಕರೆ ನೀಡಿದ್ದಾರೆ. ತೆಲುಗು ರಾಜ್ಯಗಳಲ್ಲಿ ಥಿಯೇಟರ್ಗಳನ್ನು ವಾರದ ಬಾಡಿಗೆ ವ್ಯವಸ್ಥೆಯಲ್ಲಿ ಸಿನಿಮಾ ಪ್ರದರ್ಶಿಸಲಾಗುತ್ತದೆ. ಆದರೆ, ಮಲ್ಟಿಪ್ಲೆಕ್ಸ್ಗಳಲ್ಲಿ ಪ್ರತಿ ಶೋನ ಗಳಿಕೆಯನ್ನು ಹಂಚಿಕೊಳ್ಳಲಾಗುತ್ತದೆ. ಇದೀಗ ಮಲ್ಟಿಪ್ಲೆಕ್ಸ್ಗಳಂತೆಯೇ ಸಿಂಗಲ್ ಸ್ಕ್ರೀನ್ಗಳಲ್ಲೂ ಶೇರಿಂಗ್ ವ್ಯವಸ್ಥೆ ತರಬೇಕು ಎಂಬುದು ತೆಲುಗು ರಾಜ್ಯಗಳ ಪ್ರದರ್ಶಕರ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ 60 ಪ್ರದರ್ಶಕರು, ವಿತರಕರು - ನಿರ್ಮಾಪಕರ ಜತೆ ಸಭೆ ನಡೆಸಿದ್ದು, ಒಮ್ಮತ ಮೂಡಿಬಂದಿಲ್ಲ. ಹೀಗಾಗಿ ತೆಲುಗು ರಾಜ್ಯಗಳಲ್ಲಿ ಜೂ. 1ರಿಂದ 1500ಕ್ಕೂ ಅಧಿಕ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳನ್ನು ಬಂದ್ ಮಾಡಲು ಮಾಲೀಕರು ತೀರ್ಮಾನಿಸಿದ್ದಾರೆ.
ಈ ವರ್ಷದ ಮೊದಲ ಐದು ತಿಂಗಳಲ್ಲಿ ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್, ನಾನಿ, ಬಾಲಯ್ಯ ಹೊರತುಪಡಿಸಿ ಸ್ಟಾರ್ ಚಿತ್ರಗಳು ರಿಲೀಸ್ ಆಗಿಲ್ಲ. ಇದೇ ಜೂ. 5ರಂದು ಮಣಿರತ್ನಂ ನಿರ್ದೇಶನದ ಕಮಲ್ ಹಾಸನ್, ತ್ರಿಷಾ, ಸಿಂಬು ನಟಿಸಿರುವ "ಥಗ್ಲೈಫ್' ಪ್ಯಾನ್ ಇಂಡಿಯಾ ತೆರೆಗೆ ಬರಲಿದೆ. ಬಳಿಕ ಪವನ್ ಕಲ್ಯಾಣ್ ನಟಿಸಿರುವ "ಹರಿಹರ ವೀರಮಲ್ಲು' (ಜೂ. 12), ಧನುಷ್, ನಾಗಾರ್ಜುನ, ರಶ್ಮಿಕಾ ಮಂದಣ್ಣ ಅಭಿನಯದ ಪ್ಯಾನ್ ಇಂಡಿಯಾ "ಕುಬೇರ' (ಜೂ. 20), ವಿಷ್ಣು ಮಂಚು, ಮೋಹನ್ ಲಾಲ್, ಅಕ್ಷಯ್ ಕುಮಾರ್, ಪ್ರಭಾಸ್ ನಟಿಸಿರುವ "ಕಣ್ಣಪ್ಪ' (ಜೂ. 27) ಸೇರಿ ಹಲವು ಚಿತ್ರಗಳ ಮೇಲೆ ಈ ಬಂದ್ ನೇರ ಪರಿಣಾಮ ಬೀರಲಿದೆ.