

Shine Tom Chacko: ಭೀಕರ ರಸ್ತೆ ಅಪಘಾತದಲ್ಲಿ ಮಲಯಾಳಂ ಚಿತ್ರರಂಗದ ಖ್ಯಾತ ನಟ ಶೈನ್ ಟಾಮ್ ಚಾಕೋ ಗಾಯಗೊಂಡಿದ್ದು, ಅವರ ತಂದೆ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಈ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪಾಲಕೋಡ್ ಬಳಿ ಸಂಭವಿಸಿದೆ.
41 ವರ್ಷದ ಟಾಮ್ ಚಾಕೋ ಕೇರಳದ ತ್ರಿಸ್ಸೂರು ಮೂಲದವರು. ತಮ್ಮ ತಂದೆ ಸಿಪಿ ಚಾಕೋ ಅವರ ವೈದ್ಯಕೀಯ ತಪಾಸಣೆಗಾಗಿ ಕುಟುಂಬ ಸಮೇತ ತ್ರಿಸ್ಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದರು. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪರೈಯೂರು ಮೂಲಕ ಸಾಗುವಾಗ ಪಾಲಾಕೋಡ್ ಗ್ರಾಮದ ಬಳಿ ಚಾಲಕ ಅನಿಸ್ ನಿಯಂತ್ರಣ ತಪ್ಪಿದ ಕಾರು ನಿಂತಿದ್ದ ಟ್ರಕ್ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಟಾಮ್ ಚಾಕೋ ಅವರ ತಂದೆ ಸಿಪಿ ಚಾಕೋ ಸ್ಥಳದಲ್ಲೇ ಮೃತಪಟ್ಟರು.
ನಟ ಟಾಮ್ ಚಾಕೋ ಅವರ ಸಹೋದರ ಜೋ ಜಾನ್ ಚಾಕೋ ಮತ್ತು ನಟನ ಮ್ಯಾನೇಜರ್ ಅನಿಸ್ ಗಾಯಗೊಂಡಿದ್ದಾರೆ. ಮಾಹಿತಿ ಪಡೆದ ಪಾಲಕೋಡ್ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ರಕ್ಷಿಸಿ, ಚಿಕಿತ್ಸೆಗಾಗಿ ಧರ್ಮಪುರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಿಪಿ ಚಾಕೋ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಧರ್ಮಪುರಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪಾಲಕೋಡ್ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)