

ಬೆಂಗಳೂರು: ಸದ್ಯ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಚಿತ್ರೀಕರಣದಲ್ಲಿ ‘ರಾಕಿಂಗ್ ಸ್ಟಾರ್’ ಯಶ್ ಬಿಜಿ. ಮೈಸೂರಿನಲ್ಲಿ ಭರ್ಜರಿಯಾಗಿ ಆ ಚಿತ್ರದ ಶೂಟಿಂಗ್ ಸಹ ನಡೆಯುತ್ತಿದೆ. ಹೀಗಿರುವಾಗಲೇ ಮಾಲಿವುಡ್ನ ಖ್ಯಾತ ನಟ ದುಲ್ಕರ್ ಸಲ್ಮಾನ್, ಯಶ್ ಜತೆ ಕಾಣಿಸಿಕೊಂಡಿದ್ದಾರೆ!
ಅರೇ.. ‘ಕೆಜಿಎಫ್’ನಲ್ಲಿ ದುಲ್ಕರ್ ನಟಿಸುತ್ತಿದ್ದಾರಾ? ಅಂಥದ್ದೇನಿಲ್ಲ.. ಬದಲಿಗೆ ದುಲ್ಕರ್ ನಾಯಕತ್ವದ ಚಿತ್ರದ ಚಿತ್ರೀಕರಣವೂ ಮೈಸೂರಿನಲ್ಲಿ ನಡೆಯುತ್ತಿರುವುದರಿಂದ ಈ ಇಬ್ಬರು ಸ್ಟಾರ್ಗಳು ಆಕಸ್ಮಿಕವಾಗಿ ಜಿಮ್ಲ್ಲಿ ಎದುರಾಗಿದ್ದಾರೆ.
ತಕ್ಷಣ ಒಬ್ಬರಿಗೊಬ್ಬರು ಅಪ್ಪಿಕೊಂಡು ಉಭಯ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಮುಂದಿನ ಸಿನಿಮಾಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದಾರೆ. ಜತೆಯಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಕೆಲ ಸಾಲುಗಳನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದಾರೆ ದುಲ್ಕರ್.
‘ನಿಮ್ಮನ್ನು ಭೇಟಿಯಾಗಿದ್ದು ಖುಷಿಯ ಕ್ಷಣಗಳಲ್ಲೊಂದು. ನಿಮ್ಮ ಆದರ, ಆತಿಥ್ಯಕ್ಕೆ ತುಂಬು ಹೃದಯದ ಧನ್ಯವಾದ. ಮುಂದಿನ ಷೆಡ್ಯೂಲ್ನಲ್ಲಿ ಮತ್ತೆ ಸಿಗೋಣ. ನಿಮ್ಮ ‘ಕೆಜಿಎಫ್ 2’ ಚಿತ್ರಕ್ಕಾಗಿ ಕಾಯುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಯಶ್ ನಟನೆಯ ‘ಕೆಜಿಎಫ್’ ಸಿನಿಮಾ ಮಲಯಾಳಮ್ಲ್ಲೂ ತೆರೆಕಂಡಿತ್ತು. ಒಳ್ಳೆಯ ಪ್ರತಿಕ್ರಿಯೆ ಜತೆಗೆ ದೊಡ್ಡ ಅಭಿಮಾನಿ ಬಳಗವನ್ನೂ ಯಶ್ ಸಂಪಾದಿಸಿದ್ದಾರೆ. ಹೀಗಿರುವಾಗ ದುಲ್ಕರ್ ಭೇಟಿ ಮಾಡಿರುವ ವಿಷಯ ಮಾಲಿವುಡ್ ಅಭಿಮಾನಿಗಳ ಮೊಗದಲ್ಲಿ ಸಂತಸ ತಂದಿದೆ.