

ಗ್ಯಾಂಗ್ಸ್ಟರ್ ಒಬ್ಬ ಯಾರಿಗೋ ಫೋನ್ ಮಾಡಿ ಜೀವ ಬೆದರಿಕೆ ಹಾಕುವುದು, ಹಫ್ತಾ ಕೇಳುವುದು ... ಇಂಥ ದೃಶ್ಯಗಳನ್ನೆಲ್ಲಾ ಮಹೇಶ್ ಮಂಜ್ರೇಕರ್ ಅವರ ಚಿತ್ರಗಳಲ್ಲಿ ನೋಡಿರಬಹುದು. ಈಗ ಅಂಥದ್ದೇ ಒಂದು ಅನುಭವ ಖುದ್ದು ಮಹೇಶ್ ಮಂಜ್ರೇಕರ್ ಅವರಿಗೆ ಆಗಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ, ಅಬು ಸಲೇಂ ಗ್ಯಾಂಗ್ನವರು ಎಂದು ಹೇಳಿಕೊಂಡ ಯಾರೋ ಒಬ್ಬರು, ಬಾಲಿವುಡ್ನ ಖ್ಯಾತ ನಟ ಮತ್ತು ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರಿಗೆ ಬೆದರಿಕೆ ಹಾಕಿದ್ದಾರೆ. 35 ಕೋಟಿ ಹಫ್ತಾ ಕೊಡಬೇಕು ಎಂದು ಮೆಸೇಜ್ ಕಳಿಸಿದ್ದಾರೆ.
ಇಂಥದ್ದೊಂದು ಮೆಸೇಜ್ ನೋಡಿ ಗಾಬರಿಯಾಗಿರುವ ಮಹೇಶ್ ಮಂಜ್ರೇಕರ್, ಸೀದಾ ದಾದರ್ ಪೊಲೀಸ್ ಸ್ಟೇಶನ್ಗೆ ಹೋಗಿ, ತಮಗೆ ಹೀಗೆಲ್ಲಾ ಆಗಿದೆ ಎಂದು ದೂರು ನೀಡಿದ್ದಾರೆ. ಅಬು ಸಲೇಂ ಗ್ಯಾಂಗ್ನವನೆಂದು ಪರಿಚಯಿಸಿಕೊಂಡ ಯಾರೋ ಒಬ್ಬರು, 35 ಕೋಟಿ ರೂಪಾಯಿಗಳನ್ನು ಕೊಡಬೇಕು ಎಂದು ಧಮ್ಕಿ ಹಾಕಿದ್ದಾರೆ ಎಂದು ತಮ್ಮ ದೂರಿನಲ್ಲಿ ನಮೂದಿಸಿದ್ದಾರೆ.
ಈ ಪ್ರಕರಣದಲ್ಲಿ ಸ್ವಲ್ಪ ಸೂಕ್ಷ್ಮವಾಗಿರುವುದರಿಂದ, ದಾದರ್ ಪೊಲೀಸ್ ಸಿಬಬಂದಿಯು ಈ ಪ್ರಕರಣವನ್ನು ಆಂಟಿ ಎಕ್ಸ್ಟಾರ್ಶನ್ ಸೆಲ್ಗೆ ವಗಾಯಿಸಿದೆ. ಈಗ ಈ ಪ್ರಕರಣವನ್ನು ಆಂಟಿ ಎಕ್ಸ್ಟಾರ್ಶನ್ ಸೆಲ್ ತನಿಖೆ ನಡೆಸುತ್ತಿದ್ದು, ಈ ರೀತಿ ಬೆದರಿಕೆ ಹಾಕಿದ್ದು ಯಾರು ಎಂದು ವಿಚಾರಣೆ ಮಾಡುತ್ತಿದೆ.