

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊರ ತಿರುವು ಪಡೆದುಕೊಳ್ಳುತ್ತಿದೆ. ಕಂಗನಾ ರಣಾವತ್ ಅವರಂತೂ ಸ್ವಜನಪಕ್ಷಪಾತ ವಿಚಾರವನ್ನೇ ಹೈಲೈಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಸುಶಾಂತ್ ಸಾವಿನ ವಿಚಾರಣೆಗಾಗಿ ನನ್ನನ್ನೂ ಕರೆಯಿರಿ. ನನ್ನಿಂದಲೂ ಒಂದಷ್ಟು ಮಾಹಿತಿಯನ್ನು ಪಡೆಯಿರಿ ಎಂದು ಅಂಗಲಾಚಿಕೊಂಡಿದ್ದರು. ಅದರಂತೆ ಕೊನೆಗೂ ಕಂಗನಾ ಅವರ ಆಸೆಯನ್ನು ಮುಂಬೈ ಪೊಲೀಸ್ ಈಡೇರಿಸಿದ್ದಾರೆ.
ಹೌದು, ಸುಶಾಂತ್ ಸಿಂಗ್ ಸಾವಿನ ವಿಚಾರವಾಗಿ ಕಂಗನಾ ರಣಾವತ್, ಮಹೇಶ್ ಭಟ್, ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ನ ಸಿಇಒ ಅಪೂರ್ವ ಮೆಹ್ತಾ ಅವರಿಗೆ ಮುಂಬೈ ಪೊಲೀಸ್ ಇಲಾಖೆ ಸಮನ್ ನೀಡಿ ವಿಚಾರಣೆಗೆ ಆಹ್ವಾನಿಸಿದೆ.
ಇಷ್ಟಕ್ಕೂ ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೂ, ಕಂಗನಾ ರಣಾವತ್ ಅವರಿಗೂ ಸಂಬಂಧವೇನು ಎಂಬ ಪ್ರಶ್ನೆ ಸಹಜವೇ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ, ಅವರಿಗೆ ದೊಡ್ಡ ಮಟ್ಟದಲ್ಲಿ ಕಂಬನಿ ಮಿಡಿದಿದ್ದು, ಸಂತಾಪ ಸೂಚಿಸಿದ್ದು ಅದೇ ಕಂಗನಾ. ಬಾಲಿವುಡ್ನಲ್ಲಿ ಪ್ರಚಲಿತದಲ್ಲಿರುವ ಸ್ವಜನಪಕ್ಷಪಾತದ ಕುರಿತಾಗಿ ಪ್ರಸ್ತಾಪಿಸಿದ್ದ ಕಂಗನಾ, ಅದೇ ನೆಪೋಟಿಸಂನಿಂದ ಸುಶಾಂತ್ ಆತ್ಮಹತ್ಯೆಯ ದಾರಿ ತುಳಿಯಬೇಕಾಯಿತು ಎಂದು ಹೇಳಿದ್ದರು.
ಈಗಾಗಲೇ 37ಕ್ಕೂ ಅಧಿಕ ಮಂದಿಯನ್ನು ಸುಶಾಂತ್ ಸಾವಿನ ವಿಚಾರವಾಗಿ ಮುಂಬೈ ಪೊಲೀಸ್ ಇಲಾಖೆ ವಿಚಾರಣೆ ಮಾಡಿ, ಸೂಕ್ತ ದಾಖಲೆಗಳನ್ನು ಸಂಗ್ರಹಿಸಿದೆ. ‘ಇನ್ನೆರಡು ದಿನಗಳಲ್ಲಿ ಮಹೇಶ್ ಭಟ್ ಅವರ ಹೇಳಿಕೆಯನ್ನು ಪಡೆಯಲಿದ್ದು, ಅದಾದ ಬಳಿಕ ಕಂಗನಾ ಹಾಜರಾಗಲಿದ್ದಾರೆ. ಅದಾದ ಮೇಲೆ ಧರ್ಮ ಪ್ರೊಡಕ್ಷನ್ಸ್ನ ಸಿಇಒ ಭಾಗಿಯಾಗಲಿದ್ದಾರೆ. ಕರಣ್ ಜೋಹರ್ ಸಹ ಬರುವ ಸಾಧ್ಯತೆ ಇದೆ ಎಂದು ಮಹಾರಾಷ್ಟ್ರ ಗೃಹ ಮಂತ್ರಿ ಹೇಳಿದ್ದಾರೆ. (ಏಜೆನ್ಸೀಸ್)