ಮಹೇಶ್ ಬಾಬು ಅಭಿನಯದ ಹೊಸ ಚಿತ್ರ ಇದೇ ...

Mahesh Babu - Final
Published on

ಲಾಕ್‌ಡೌನ್ ಸಮಯವನ್ನು ಮಕ್ಕಳ ಜತೆಗೆ ಸಖತ್ತಾಗಿ ಕಳೆದಿರುವ ಟಾಲಿವುಡ್ ಹೀರೋ ಮಹೇಶ್ ಬಾಬು, ಹೊಸ ಸಿನಿಮಾಗೆ ರೆಡಿಯಾಗುತ್ತಿದ್ದಾರೆ. ಲಾಕ್‌ಡೌನ್ ಸಂಪೂರ್ಣವಾಗಿ ಮುಗಿದು, ಚಿತ್ರೀಕರಣ ಚಟುವಟಿಕೆಗಳು ಪ್ರಾರಂಭವಾಗುತ್ತಿದ್ದಂತೆಯೇ, ಈ ಹೊಸ ಚಿತ್ರ ಸೆಟ್ಟೇರಲಿದೆ.

ಮಹೇಶ್ ಬಾಬು ಅಭಿನಯದ ಹೊಸ ಚಿತ್ರ ಯಾವುದು? ಈ ಚಿತ್ರದ ಮೊದಲ ಪೋಸ್ಟರ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ. ಇಂದು ಮಹೇಶ್ ಬಾಬು ಅವರ ತಂದೆ, ‘ಸೂಪರ್ ಸ್ಟಾರ್’ ಕೃಷ್ಣ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿರುವ ಮಹೇಶ್, ಅದನ್ನು ತಮ್ಮ ತಂದೆಗೆ ಉಡುಗೊರೆಯಾಗಿ ಅರ್ಪಿಸುವುರದರ ಜತೆಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಅಂದಹಾಗೆ, ಮಹೇಶ್ ಬಾಬು ಅವರ ಹೊಸ ಚಿತ್ರದ ಹೆಸರು ‘ಸರಕಾರು ವಾರಿ ಪಾಟ’. ಈ ಚಿತ್ರವನ್ನು ‘ಗೀತ ಗೋವಿಂದಂ’ ಖ್ಯಾತಿಯ ಪರಶುರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಮೈತ್ರಿ ಮೂವಿ ಮೇಕರ್ಸ್‌ ಸಂಸ್ಥೆಯಿಂದ ರಾಮ್ ಅಚಂಟ ಮತ್ತು ಗೋಪಿ ಅಚಂಟ ನಿರ್ಮಾಣ ಮಾಡುತ್ತಿದ್ದಾರೆ. ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕ ಎಸ್.ಎಸ್. ಥಮನ್, ಈ ಚಿತ್ರಕ್ಕೆ ಸಂಗೀತವನ್ನು ಸಂಯೋಜಿಸುತ್ತಿದ್ದಾರೆ.

‘ಸರಕಾರು ವಾರಿ ಪಾಟ’ ಚಿತ್ರದ ಪೋಸ್ಟರ್ ಸಖತ್ ಸ್ಟೈಲಿಶ್ ಆಗಿದ್ದು, ಇಲ್ಲಿ ಮಹೇಶ್ ಬಾಬು ಅವರ ಮುಖವನ್ನು ಪೂರ್ತಿಯಾಗಿ ತೋರಿಸಲಾಗಿಲ್ಲ. ಅರ್ಧ ಮುಖ ಮಾತ್ರ ಕಾಣಿಸುತ್ತಿದ್ದು, ಕುತ್ತಿಗೆಯಲ್ಲಿ ಒಂದು ರೂಪಾಯಿಯ ಕಾಯಿನ್ ಟ್ಯಾಟೂ ಇದೆ. ಇದೆಲ್ಲಾ ಚಿತ್ರದ ಬಗ್ಗೆ ಕುತೂಹ ಮತ್ತು ನಿರೀಕ್ಷೆಗಳನ್ನು ಹೆಚ್ಚು ಮಾಡಿಸಿದೆ.

ಈಗಾಗಲೇ ಮಹೇಶ್ ಬಾಬು ಅಭಿನಯದ ‘ಮಹರ್ಷಿ’ ಮತ್ತು ‘ಸರಿಲೇರು ನೀಕೆವ್ವರು’ ಚಿತ್ರಗಳು ಬಿಡುಗಡೆಯಾಗಿ ಆಂಧ್ರಾದ್ಯಂತ ಸೂಪರ್ ಹಿಟ್ ಎನಿಸಿಕೊಂಡಿವೆ. ಈಗ ‘ಸರಕಾರು ವಾರಿ ಪಾಟ’ ಸಹ ಹಿಟ್ ಆಗಿ, ಹ್ಯಾಟ್ರಿಕ್ ಆಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಮಹೇಶ್ ಬಾಬು.

ಸದ್ಯಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆಯ ಕೆಲಸಗಳೆಲ್ಲವನ್ನೂ ಮುಗಿಸಿರುವ ಪರಶುರಾಮ್ ಮತ್ತು ತಂಡ, ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಯಲ್ಲಿ ತೊಡಗಿಸಿಕೊಂಡಿದೆ. ಲಾಕ್‌ಡೌನ್ ಮುಗಿದ ನಂತರ ಚಿತ್ರ ಶುರುವಾಗುವ ನಿರೀಕ್ಷೆಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net