

ಬೆಂಗಳೂರು: ಇದೇ ತಿಂಗಳ 20ರಿಂದ 24ರ ವರೆಗೆ ನಡೆಯಲಿರುವ ಏಳನೇ ರಾಜಸ್ಥಾನ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗಕ್ಕೆ ಸುಧೀರ್ ಅತ್ತಾವರ್ ನಿರ್ದೇಶನದ ‘ಮಡಿ’ ಚಿತ್ರ ಆಯ್ಕೆಯಾಗಿದೆ. ಕರಾವಳಿಯ ಜನಪದ ಕಲೆ ಆಟಿ ಕಳಂಜದ ಹಿನ್ನೆಲೆಯಿರುವ ಈ ಚಿತ್ರಕ್ಕೆ ವಿದ್ಯಾಧರ್ ಶೆಟ್ಟಿ ಮತ್ತು ಸೂರಜ್ ಚಾರ್ಲ್ಸ್ ಬಂಡವಾಳ ಹೂಡಿದ್ದಾರೆ. ಜೈಪುರ ಮತ್ತು ಜೋಧ್ಪುರದಲ್ಲಿ ನಡೆಯುವ ಈ ಚಿತ್ರೋತ್ಸವದಲ್ಲಿ ವಿಶ್ವದ 50ಕ್ಕಿಂತಲೂ ಹೆಚ್ಚು ಸಿನಿಮಾಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಅವುಗಳ ಪೈಕಿ ವರ್ಲ್ಡ್ ಕಾಂಪಿಟೇಷನ್ ವಿಭಾಗದಲ್ಲಿ ಸುಮಾರು 15 ಸಿನಿಮಾಗಳೊಂದಿಗೆ ‘ಮಡಿ’ ಚಿತ್ರ ಪ್ರಶಸ್ತಿಗಾಗಿ ಸೆಣಸಲಿದೆ.
24ರಂದು ಜೈಪುರ ಮತ್ತು ಜೋಧ್ಪುರದ ಮಿರಾಜ್ ಬಯೋಸ್ಕೋಪ್ ಸಿನಿಮಾ ಹಾಲ್ಗಳಲ್ಲಿ ‘ಮಡಿ’ ಪ್ರದರ್ಶನವಾಗಲಿದೆ. ನಟಿ ಮತ್ತು ಗಾಯಕಿ ಎಂ. ಡಿ. ಪಲ್ಲವಿ, ರಂಗಭೂಮಿ ಕಲಾವಿದರಾದ ರಾಮಚಂದ್ರ ದೇವಾಡಿಗ, ಮಾಸ್ಟರ್ ಸಂತೋಷ್, ವೆಂಕಟ್ ರಾವ್, ರವೀಂದ್ರ ಶೆಟ್ಟಿ ಚಿತ್ರದಲ್ಲಿ ನಟಿಸಿದ್ದಾರೆ. ಬಿ.ಎಸ್. ಶಾಸ್ತ್ರಿ ಛಾಯಾಗ್ರಹಣ, ವಿದ್ಯಾಧರ್ ಶೆಟ್ಟಿ ಸಂಕಲನ, ಆಕಾಶ್ ಪತುಲೆ ಸಂಗೀತ ನೀಡಿದ್ದಾರೆ.