ಕರಣ್​ ಜೋಹರ್​ ವಿರುದ್ಧ ದೂರು ಕೊಟ್ಟ ಮಧುರ್​ ಭಂಡಾರ್ಕರ್​

Karan - Johar - Final
Published on

ಮುಂಬೈ: ಬಾಲಿವುಡ್​ನ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್​ ಜೋಹರ್​ ಮತ್ತು ಅಪೂರ್ವ ಮೆಹ್ತಾ ವಿರುದ್ಧ ಇಂಡಿಯನ್​ ಮೋಷನ್​ ಪಿಕ್ಚರ್ಸ್​ ಪ್ರೊಡ್ಯೂಸರ್ಸ್​ ಅಸೋಸಿಯೇಷನ್​ಗೆ (ಐಎಂಪಿಪಿಎ) ನಿರ್ದೇಶಕ ಮಧುರ್​ ಭಂಡಾರ್ಕರ್​ ದೂರು ನೀಡಿದ್ದಾರೆ.

ಮಧುರ್​ 'ಬಾಲಿವುಡ್​ ವೈವ್ಸ್​' ಎಂಬ ಚಿತ್ರ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಮಧ್ಯೆ, ಕರಣ್​ ಮತ್ತು ಅಪೂರ್ವ ಇಬ್ಬರೂ ನೆಟ್​​ಫ್ಲಿಕ್ಸ್​ಗಾಗಿ ಒಂದು ವೆಬ್​ಸೀರೀಸ್​ ಸಿದ್ಧಪಡಿಸಿದ್ದು, ಅದಕ್ಕೆ 'ಬಾಲಿವುಡ್​ ವೈವ್ಸ್​' ಎಂಬ ಹೆಸರು ಬಿಟ್ಟುಕೊಡುವಂತೆ ಮನವಿ ಸಲ್ಲಿಸಿದ್ದರು. ಆದರೆ, ಮಧುರ್​ ಅದಕ್ಕೆ ಒಪ್ಪಿರಲಿಲ್ಲ. ಕರಣ್​ ಮತ್ತೂ ಅಪೂರ್ವ ಆ ಹೆಸರನ್ನು ಸ್ವಲ್ಪ ಬದಲಾಯಿಸಿ 'ಫ್ಯಾಬುಲಸ್​ ಲೈವ್ಸ್​ ಆಫ್​ ಬಾಲಿವುಡ್​ ವೈವ್ಸ್​' ಎಂಬ ಹೆಸರಿನಲ್ಲಿ ಕಾರ್ಯಕ್ರಮ ರೂಪಿಸಿದ್ದು, ಈ ಕಾರ್ಯಕ್ರಮವು ನವೆಂಬರ್​ 27ರಿಂದ ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಮ್​ ಆಗಲಿದೆ.

ಈ ಸಂಬಂಧ ಕರಣ್​ ಮತ್ತು ಅಪೂರ್ವಗೆ ಹೆಸರು ಬದಲಾಯಿಸಲು ಮಧುರ್​ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, 'ನೀವು 'ಬಾಲಿವುಡ್​ ವೈವ್ಸ್​' ಎಂಬ ಹೆಸರನ್ನು ಬಿಟ್ಟುಕೊಡಲು ಕೇಳಿದ್ದಿರಿ. ಆದರೆ, ನಾನೀಗಾಗಲೇ ಆ ಯೋಜನೆಯಲ್ಲಿ ತೊಡಗಿಸಿಕೊಂಡಿರುವುದರಿಂದ, ಬಿಟ್ಟುಕೊಡಲು ಸಾಧ್ಯವಿಲ್ಲ ಎಂದಿದ್ದೆ. ನೀವು ಆ ಹೆಸರನ್ನೇ ಸ್ವಲ್ಪ ಬದಲಾಯಿಸಿ ಇಟ್ಟಿದ್ದೀರಿ. ಇದು ನೈತಿಕವಾಗಿ ತಪ್ಪು. ದಯವಿಟ್ಟು ಈ ವಿಚಾರದಲ್ಲಿ ತೊಂದರೆ ಕೊಡಬೇಡಿ. ಆದಷ್ಟು ಬೇಗ ಹೆಸರು ಬದಲಾಯಿಸಿ ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ' ಎಂದಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಮನವಿ ಮಾಡಿಕೊಳ್ಳುವುದರ ಜತೆಗೆ, ಕರಣ್​ ಜೋಹರ್​ ಮತ್ತು ಅಪೂರ್ವ ಮೆಹ್ತಾ ವಿರುದ್ಧ ಇಂಡಿಯನ್​ ಮೋಷನ್​ ಪಿಕ್ಚರ್ಸ್​ ಪ್ರೊಡ್ಯೂಸರ್ಸ್​ ಅಸೋಸಿಯೇಷನ್​ಗೆ (ಐಎಂಪಿಪಿಎ) ನಿರ್ದೇಶಕ ಮಧುರ್​ ಭಂಡಾರ್ಕರ್​ ದೂರು ಕೊಟ್ಟಿದ್ದಾರೆ. ಐಎಂಪಿಪಿಎ ಈ ಸಂಬಂಧ ಧರ್ಮ ಪ್ರೊಡಕ್ಷನ್ಸ್​ ಮತ್ತು ನೆಟ್​ಫ್ಲಿಕ್ಸ್​ನವರಿಗೆ ಪತ್ರ ಬರೆದಿದ್ದು, ಹೆಸರು ಬದಲಾಯಿಸಲು ಸೂಚಿಸಿದೆ.

'ಫ್ಯಾಬುಲಸ್​ ಲೈವ್ಸ್​ ಆಫ್​ ಬಾಲಿವುಡ್​ ವೈವ್ಸ್​' ಕಾರ್ಯಕ್ರಮವು ಬಾಲಿವುಡ್​ನ ಜನಪ್ರಿಯ ನಟರ ಪತ್ನಿಯರು ಮತ್ತು ಅವರ ಜೀವನಶೈಲಿಯ ಕುರಿತಾದ ಕಥೆಯಾಗಿದ್ದು, ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net