ಮದ ಮತ್ಸರ ತಾಯಿ ಮಮತೆ: ಮದಗಜ ಸಿನಿಮಾ ವಿಮರ್ಶೆ..

Madagaja
Published on
  • ಚಿತ್ರ: ಮದಗಜ
  • ನಿರ್ಮಾಣ: ಉಮಾಪತಿ ಫಿಲಂಸ್
  • ನಿರ್ದೇಶನ: ಮಹೇಶ್ ಕುಮಾರ್
  • ತಾರಾಗಣ: ಶ್ರೀಮುರಳಿ, ಆಶಿಕಾ ರಂಗನಾಥ್, ಜಗಪತಿ ಬಾಬು, ದೇವಯಾನಿ, ಗರುಡ ರಾಮ್ ಅನಿಲ್ ಕುಮಾರ್, ರಂಗಾಯಣ ರಘು ಮುಂತಾದವರು

| ಮಂಜು ಕೊಟಗುಣಸಿ ಬೆಂಗಳೂರು

‘ಒಳ್ಳೇ ಉದ್ದೇಶ ಇದ್ರೆ, ಬೆಂಕಿಯಲ್ಲಿ ನಿಂತಿದ್ರೂ ಮಳೆ ಬಂದು ಕಾಪಾಡುತ್ತೆ. ಕೆಟ್ಟ ಉದ್ದೇಶ ಇದ್ರೆ, ಮಳೇಲಿ ನಿಂತಿದ್ರೂ ಸಿಡಿಲು ಬಂದು ಹೊಡ್ಕೊಂಡ್ ಹೋಗುತ್ತೆ ...’ ಹೀಗೊಂದಿಷ್ಟು ಖಡಕ್ ಡೈಲಾಗ್​ಗಳ ಮೂಲಕ, ತೆರೆಮೇಲೆ ಕಾಣಿಸುವ ದೃಶ್ಯ ಸೊಬಗಿನ ಮೂಲಕ, ಹಿನ್ನೆಲೆಯಲ್ಲಿ ತೇಲಿ ಬರುವ ಸಂಗೀತದ ಮೂಲಕ ಕೊನೆಯವರೆಗೂ ನೋಡಿಸಿಕೊಂಡು ಹೋಗುತ್ತದೆ ‘ಮದಗಜ’. ಗಮನದಲ್ಲಿರಲಿ ಎಂದಿನಂತೆ ಇದೊಂದು ರಿವೆಂಜ್ ಸ್ಟೋರಿ. ಅಮ್ಮನ ಕರುಣೆ, ಅಪ್ಪನ ಹತಾಶೆ, ಮಗನ ಸೇಡು ಇಲ್ಲಿಯೂ ಮುಂದುವರಿದಿದೆ. ಆದರೆ, ಅದನ್ನು ತೋರಿಸಿರುವ ರೀತಿ ಕೊಂಚ ವಿಭಿನ್ನವಾಗಿದೆ. ವಾರಾಣಸಿ ಸುಕ್ಷೇತ್ರದ ಮತ್ತೊಂದು ಮಗ್ಗುಲಿನಲ್ಲಿನ ಹೆಣ ಸುಡುವ ಘಾಟ್​ಗಳಲ್ಲಿ ಕ್ರೌರ್ಯದ ಮುಖವನ್ನೇ ಹೊದ್ದು, ಅಲ್ಲಿಯೇ ಆಡಿ ಬೆಳೆದ ಸೂರ್ಯನಿಗೆ ರಕ್ತ ಹರಿಸೋದು ಅಂದ್ರೆ ಹೆಣ ಸುಟ್ಟಷ್ಟೇ ಸುಲಭ. ಅಲ್ಲಿನ ಆ ನಂಟು ಕರ್ನಾಟಕದ ಶಿವಗಢಕ್ಕೂ ಅಂಟಿಕೊಂಡಿರುತ್ತದೆ. ಜಮೀನು ವಿಚಾರಕ್ಕೆ ಶಿವಗಢಕ್ಕೂ ನಾಯಕನ ಎಂಟ್ರಿಯಾಗುತ್ತದೆ. ಆ ಬಳಿಕ ಅಲ್ಲಿ ಕಾಣಿಸುವುದೆಲ್ಲವೂ ಅಬ್ಬರ, ಕ್ರೌರ್ಯ, ರಕ್ತದ ಹೊಳೆ, ತಾಯಿಯ ಮಮತೆ ಮತ್ತು ಮನದರಸಿಯ ತುಂಟತನ.

ಕಥೆ ವಿಚಾರಕ್ಕೆ ಬರುವುದಾದರೆ ಹತ್ತರಲ್ಲಿ ಹನ್ನೊಂದಾದರೂ, ನಿರ್ದೇಶಕ ಮಹೇಶ್ ಪೋಣಿಸಿರುವ ಅಂಶಗಳು ಚಿತ್ರವನ್ನು ಮತ್ತೊಂದು ಹಂತಕ್ಕೆ ಮೇಲಕ್ಕೆತ್ತಿವೆ. ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳನ್ನೇ ಅಸ್ತ್ರಗಳನ್ನಾಗಿಸಿಕೊಂಡಿರುವ ನಿರ್ದೇಶಕರು, ಪ್ರೇಕ್ಷಕ ಬೇಡುವ ವಿಚಾರಗಳನ್ನೇ ನೀಡಿ ಶಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ. ಹಾಗಾಗಿ, ‘ಮದಗಜ’ ಆರಂಭದಿಂದ ಕೊನೆಯವರೆಗೂ ಘೀಳಿಡುತ್ತಲೇ ಹೋಗುತ್ತದೆ! ಮಾತುಮಾತಿಗೂ ರಕ್ತರಕ್ತ ಎಂಬ ಸಂಭಾಷಣೆಗಳು ಕಲಾವಿದರ ಬಾಯಿಂದ ಬಂದಷ್ಟೇ ಸಲೀಸಾಗಿ ಮಣ್ಣಲ್ಲಿಯೂ ಹರಿದಿದೆ. ಅದೇ ರೀತಿ ರಕ್ತ ಸಂಬಂಧದ ಮತ್ತೊಂದು ಮುಖವನ್ನೂ ಮೌನವಾಗಿಯೇ ತೆರೆಮೇಲೆ ನೋಡಬಹುದು. ತಾಯಿಯ ಸೆಂಟಿಮೆಂಟ್​ಗೂ ಮದಗಜನ ಒಡಲಲ್ಲಿ ಜಾಗವಿದೆ. ಪ್ರೀತಿ, ಪ್ರೇಮಕ್ಕೂ ಸ್ಥಳ ಕಲ್ಪಿಸಿದರಾದರೂ ಅದರ ಪರಿಧಿ ತುಂಬ ಕಡಿಮೆ. ಹಾಸ್ಯವೂ ಊಟಕ್ಕೆ ಬೇಕಾದ ಉಪ್ಪಿನಷ್ಟಿದೆ. ಮಿಕ್ಕಂತೆ ಕಾಣಿಸುವುದೆಲ್ಲವೂ ರಕ್ತದೋಕುಳಿ!

ಶ್ರೀಮುರಳಿ ಸಂಭಾಷಣೆ ಮತ್ತು ಆಕ್ಷನ್ ಮೂಲಕವೇ ತೆರೆಮೇಲೆ ಅಬ್ಬರಿಸಿದ್ದಾರೆ. ಅವರ ಅಬ್ಬರಕ್ಕೆ ಮತ್ತಷ್ಟು ಮೈಲೇಜು ನೀಡಿದ್ದು ರವಿ ಬಸ್ರೂರು ಅವರು ಹಿನ್ನೆಲೆ ಸಂಗೀತ. ನವೀನ್ ಕುಮಾರ್ ಅವರ ಕ್ಯಾಮರಾ ಕಣ್ಣಿನಲ್ಲಿ ಕಾಣಿಸುವುದೆಲ್ಲವೂ ಅಚ್ಚರಿ! ಹರೀಶ್ ಕೊಮ್ಮೆ ಸಂಕಲನ ಮೊನಚಾಗಿದೆ. ಪ್ರೇಕ್ಷಕನ ಕಣ್ಣು ಬೇರೆಡೆ ಇಣುಕಿಯೂ ನೋಡದಂತೆ ಹಿಡಿದಿಡುವಲ್ಲಿ ಇವರೆಲ್ಲರ ತೆರೆಹಿಂದಿನ ಪಾತ್ರ ದೊಡ್ಡದಿದೆ. ಒಟ್ಟಾರೆಯಾಗಿ ‘ಮದಗಜ’ನಷ್ಟೇ ಇಡೀ ಸಿನಿಮಾ ತಾಂತ್ರಿಕವಾಗಿ ಬಲಿಷ್ಟವಾಗಿದೆ ಎಂದರೆ ಅತಿಶಯೋಕ್ತಿ ಅನಿಸದು. ತಾಯಿ ಪಾತ್ರದಲ್ಲಿ ಎದುರಾಗುವ ದೇವಯಾನಿ, ಭೈರವನಾಗಿ ರೌದ್ರಾವತಾರ ತಾಳುವ ಜಗಪತಿ ಬಾಬು ತಂತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ನಾಯಕನಷ್ಟೇ ಪರಾಕ್ರಮಿ ವಿಲನ್​ಗಳಾದ ಗರುಡ ರಾಮ್ ಅನಿಲ್ ಕುಮಾರ್ ಚಿತ್ರವನ್ನು ಆಳಿದ್ದಾರೆ. ಆಶಿಕಾ ಗೊಂಬೆಯಂತೆ ಕಂಗೊಳಿಸಿದ್ದಾರೆ. ರಂಗಾಯಣ ರಘು ಅವರ ಪಾತ್ರ ಚಿತ್ರಕ್ಕೆ ಬೋನಸ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net