

ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ 'ಯುವರತ್ನ' ಚಿತ್ರತಂಡದಿಂದ ಏನಾದರೂ ಬಿಡುಗಡೆಯಾಗಿ ಬಹಳ ಸಮಯವೇ ಆಗಿತ್ತು. ಇದೀಗ 'ಪವರ್ ಆಫ್ ಯೂಥ್' ಎಂಬ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದೆ.
'ಪವರ್ ಆಫ್ ಯೂಥ್' ಯುವಕರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂದು ಸಾರುವ ಹಾಡಾಗಿದ್ದು, ಇದನ್ನು ನಕಾಶ್ ಅಜೀಜ್ ಹಾಡಿದರೆ, ಎಸ್.ಎಸ್. ಥಮನ್ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದ್ದು, ಯೂಟ್ಯೂಬ್ನ ಹೊಂಬಾಳೆ ಮ್ಯೂಸಿಕ್ ಚಾನಲ್ನಡಿ ಬಿಡುಗಡೆಯಾಗಿದೆ.
'ಯುವರತ್ನ' ಚಿತ್ರದ ಚಿತ್ರೀಕರಣವೂ ಈಗಾಗಲೇ ಮುಕ್ತಾಯವಾಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಚಿತ್ರವು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರವು ಈ ವರ್ಷ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ಕರೊನಾ ಮತ್ತು ಲಾಕ್ಡೌನ್ನಿಂದಾಗಿ ಚಿತ್ರವು ತಡವಾಗಿದ್ದು, ಒಂದು ವರ್ಷ ತಡವಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಜೊತೆಗೆ ಧನಂಜಯ್, ಸಯೇಷಾ ಸೆಹ್ಗಲ್, ದಿಗಂತ್, ಸೋನು ಗೌಡ ಮುಂತಾದವರು ಅಭಿನಯಿಸಿದ್ದು, ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದಿದ್ದಾರೆ ಸಂತೋಷ್ ಆನಂದರಾಮ್. ಇನ್ನು ವಿಜಯ್ಕುಮಾರ್ ಕಿರಗಂದೂರು ಈ ಚಿತ್ರವನ್ನು ತಮ್ಮ ಹೊಂಬಾಳೆ ಫಿಲಂಸ್ನಡಿ ನಿರ್ಮಾಣ ಮಾಡಿದ್ದಾರೆ.