ಶಂಕರ್ ನಿರ್ದೇಶನದ ಚಿತ್ರಗಳನ್ನು ನಿಲ್ಲಿಸಲು ಲೈಕಾ ಪ್ರೊಡಕ್ಷನ್ಸ್ ಪ್ರಯತ್ನ

Shankar - Lyca Productions - Final
Published on

ಚೆನ್ನೈ: ಶಂಕರ್​ ಮತ್ತು ಲೈಕಾ ಪ್ರೊಡಕ್ಷನ್ಸ್​ ನಡುವಿನ ಗಲಾಟೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಇದೀಗ ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆಯು, ಆಂಧ್ರ ಮತ್ತು ಮಹಾರಾಷ್ಟ್ರ ಫಿಲ್ಮ್​ ಚೇಂಬರ್​ಗಳಿಗೆ ಪತ್ರ ಬರೆದಿದ್ದು, ಇಂಡಿಯನ್​ 2 ಚಿತ್ರವನ್ನು ಮುಗಿಸುವ ಮುನ್ನ ಬೇರೆ ಚಿತ್ರಗಳನ್ನು ನಿರ್ದೇಶಿಸುವುದಕ್ಕೆ ನಿರ್ದೇಶಕ ಶಂಕರ್​ಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದೆ.

ಕಮಲ್​ ಹಾಸನ್​ ಅಭಿನಯದ ಇಂಡಿಯನ್​ 2 ಚಿತ್ರವನ್ನು ಶಂಕರ್​ ನಿರ್ದೇಶನದಲ್ಲಿ ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆ ನಿರ್ಮಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದ ಚಿತ್ರೀಕರಣ ಒಂದೂವರೆ ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು. ಕಳೆದ ವರ್ಷದ ಆರಂಭದಲ್ಲಿ ಚಿತ್ರದಲ್ಲೊಂದು ಅವಘಡವಾಗಿ ಮೂರು ಜನ ಮೃತಪಟ್ಟಿದ್ದರು. ಅದರಿಂದ ಚಿತ್ರೀಕರಣ ನಿಂತಿತ್ತು. ಆ ನಂತರ ಲಾಕ್​ಡೌನ್​ನಿಂದ ಚಿತ್ರ ಇನ್ನಷ್ಟು ವಿಳಂಬವಾಯಿತು. ತಮಿಳುನಾಡು ಚುನಾವಣೆಗಳಲ್ಲಿ ಕಮಲ್​ ಹಾಸನ್​ ಅವರು ಸ್ಪರ್ಧಿಸಿದ್ದರಿಂದ, ಚಿತ್ರ ಮತ್ತಷ್ಟು ವಿಳಂಬವಾಯಿತು.

ಒಂದು ಕಡೆ ಚಿತ್ರ ವಿಳಂಬವಾಗುತ್ತಿದ್ದಂತೆಯೇ ಶಂಕರ್​ ಬೇರೆ ಚಿತ್ರಗಳನ್ನು ನಿರ್ದೇಶಿಸುವುದಾಗಿ ಘೋಷಿಸಿದರು. ರಾಮ್​ಚರಣ್​ ತೇಜ ಅಭಿನಯದಲ್ಲೊಂದು ತೆಲುಗು ಚಿತ್ರ, ರಣವೀರ್​ ಸಿಂಗ್​ ಅಭಿನಯದಲ್ಲಿ ಹಿಂದಿಯಲ್ಲಿ ಅನ್ನಿಯನ್​ ರೀಮೇಕ್​ … ಹೀಗೆ ಎರಡು ಚಿತ್ರಗಳನ್ನು ನಿರ್ದೇಶಿಸುವುದಾಗಿ ಘೋಷಿಸಿದರು ಶಂಕರ್​. ಒಂದು ಈ ವರ್ಷ, ಮತ್ತೊಂದನ್ನು ಮುಂದಿನ ವರ್ಷ ಮಾಡುವುದಾಗಿ ಅವರು ಹೇಳಿದ್ದರು.

ಈ ಎರಡು ಚಿತ್ರಗಳನ್ನು ಕೈಗೆತ್ತಿಗೊಂಡರೆ, ಇಂಡಿಯನ್​ 2 ಚಿತ್ರ ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆಯು ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ, ನ್ಯಾಯಾಲಯವು ಈ ಪ್ರಕರಣವನ್ನು ಪರಸ್ಪರ ಬಗೆಹರಿಸಿಕೊಳ್ಳುವುದಕ್ಕೆ ಸೂಚಿಸಿತ್ತು. ನ್ಯಾಯಾಲಯವು ಹೀಗೆ ಹೇಳಿದ ಮೇಲೆ, ಆಂಧ್ರ ಮತ್ತು ಮಹಾರಾಷ್ಟ್ರ ಫಿಲ್ಮ್​ ಚೇಂಬರ್​ಗಳಿಗೆ ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆಯು ಪತ್ರ ಬರೆದಿದೆ., ಇಂಡಿಯನ್​ 2 ಚಿತ್ರವನ್ನು ಮುಗಿಸುವ ಮುನ್ನ ಬೇರೆ ಚಿತ್ರಗಳನ್ನು ನಿರ್ದೇಶಿಸುವುದಕ್ಕೆ ನಿರ್ದೇಶಕ ಶಂಕರ್​ಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದೆ.

ಲೈಕಾ ಪ್ರೊಡಕ್ಷನ್ಸ್​ ಮನವಿಗೆ ಆಂಧ್ರ ಮತ್ತು ಮಹಾರಾಷ್ಟ್ರ ಫಿಲ್ಮ್​ ಚೇಂಬರ್​ಗಳು ಸದ್ಯಕ್ಕೆ ಯಾವುದೇ ಉತ್ತರವನ್ನು ನೀಡಿಲ್ಲ. ಈ ಮನವಿಗೆ ಯಾವ ರೀತಿ ಸ್ಪಂದನೆ ಸಿಗುತ್ತದೆ ಎಂದು ಇನ್ನಷ್ಟೇ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net