ಲವರ್ ಬಾಯ್​ ಮಧುಸೂದನ್ : ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟ

vasthu 2
Published on

ಬೆಂಗಳೂರು: ‘ವಿಜಯಾನಂದ’ ಖ್ಯಾತಿಯ ನಟಿ ಸಿರಿ ಪ್ರಹ್ಲಾದ್ ಜತೆ ಕಳೆದ ನ.17ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಮಧುಸೂದನ ಗೋವಿಂದ್ ಹೊಸ ವರ್ಷದ ಸಂಭ್ರಮದಲ್ಲಿದ್ದಾರೆ. ಸದ್ಯ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಕೇಶವಮೂರ್ತಿ ನಿರ್ದೇಶನದ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಚಿತ್ರವು ಇದೇ ತಿಂಗಳ 10ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಲವರ್‌ಬಾಯ್ ಆಗಿ ಕಾಣಿಸಿಕೊಂಡಿರುವ ಮಧುಸೂದನ್‌ಗೆ ಅಪೂರ್ವ ಭಾರದ್ವಾಜ್ ಜೋಡಿಯಾಗಿದ್ದಾರೆ. ತಮ್ಮ ಎರಡನೇ ಸಿನಿಮಾದ ಕುರಿತು,‘‘ಮೇಡ್ ಇನ್ ಬೆಂಗಳೂರು’ ಸಿನಿಮಾದ ಬಳಿಕ ಇದು ನನ್ನ ಎರಡನೇ ಸಿನಿಮಾ. ಮೊದಲಿಗೆ ಈ ಚಿತ್ರಕ್ಕೆ ಆಡಿಷನ್ ಮೂಲಕವೇ ಆಯ್ಕೆಯಾದೆ. ಇದು ಕ್ರೈಂ-ಥ್ರಿಲ್ಲರ್ ಚಿತ್ರವಾಗಿದ್ದು, ನಾನು ಮುಖ್ಯಪಾತ್ರದಲ್ಲಿದ್ದೇನೆ. ಸಿನಿಮಾದ ಟೈಟಲ್ ಹೇಳುವಂತೆಯೇ, ನನ್ನ ಪಾತ್ರವನ್ನು ಎರಡು ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಹುದು. ಇನ್ನೊಬ್ಬರು ನಮ್ಮ ವಸ್ತುಗಳನ್ನು ಅಥವಾ ಮನಸ್ಸು, ಆಸೆಗಳನ್ನು ಕದಿಯಬಹುದು. ಹೀಗೆ ಕದಿಯುವವರಿಂದ ರಕ್ಷಿಸಿಕೊಳ್ಳಲು ಹೋಗಿ ನಮ್ಮನ್ನು ನಾವೇ ಹೇಗೆ ಕಳೆದುಕೊಳ್ಳುತ್ತೇವೆ ಎಂಬುದನ್ನು ನನ್ನ ಪಾತ್ರ ತಿಳಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ ನಾನು ಕದ್ದಿದ್ದೆ ಹಾಗೂ ಏನೋ ಕಳೆದುಕೊಂಡಿದ್ದೆ. ಹೀಗೆ ಕದಿಯುವವರ ಮಾನಸಿಕತೆ ಹೇಗಿರುತ್ತದೆ ಎಂಬುದು ಈ ಕಥೆಯ ಮೂಲಕ ಅರ್ಥವಾಯಿತು. ಒಂದು ವಸ್ತುವಿನ ಜತೆ ನಾವು ತುಂಬಾ ನಂಟು ಹೊಂದಿರುತ್ತೇವೆ. ಅದಕ್ಕಾಗಿ ಇಡೀ ಜೀವನವನ್ನೇ ಹೇಗೆ ಮುಡುಪಾಗಿಡುತ್ತೇವೆ ಎಂಬುದನ್ನು ಇಲ್ಲಿ ಹೇಳಲಾಗುತ್ತಿದೆ’ ಎಂದು ಮಧುಸೂದನ್ ಮಾಹಿತಿ ನೀಡುತ್ತಾರೆ.

ಎರಡು ಸಿನಿಮಾಗಳಿಗೆ ಒಪ್ಪಿಗೆ: ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಚಿತ್ರದ ಬಳಿಕ ಮಧುಸೂದನ್ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಗಂಗಾಧರ್ ಸಾಲಿಮಠ ನಿರ್ಮಾಣದ ‘ಫ್ರೈಡೇ’ ಹಾಗೂ ಸುನಿಲ್ ಭಾರದ್ವಾಜ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿರಿ ಪ್ರಹ್ಲಾದ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಮಧುಸೂದನ್ ಪರಸ್ಪರ ಇಬ್ಬರು ಆಸಕ್ತಿಗಳನ್ನು ಗೌರವಿಸಿಕೊಂಡು ನೆಮ್ಮದಿಯಿಂದ ಬದುಕು ನಡೆಸುತ್ತಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net