

ಕರೋನಾ ಕಾಟ ಕಡಿಮೆಯಾಗುತ್ತಲೇ ಕನ್ನಡ ಚಿತ್ರರಂಗದಲ್ಲಿ ಮೊದಲಿಗಿಂತಲೂ ಬಿರುಸಾಗಿ ಸಿನಿಮಾ ಕೆಲಸಗಳು ನಡೆಯುತ್ತಿವೆ. ಅದರಲ್ಲಂತೂ ಹೊಸ ಕನಸುಗಳನ್ನು ಹೊತ್ತ ಹೊಸಬರ ತಂಡಗಳೇ ಹೆಚ್ಚಾಗಿವೆ. ಅದೇ ಸಾಲಿಗೆ ಸೇರುತ್ತದೆ 'ಅಸ್ಥಿರ' ಚಿತ್ರತಂಡ. ಈಗಾಗಲೇ ಎರಡು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಪ್ರಮೋದ್ ಎಸ್. ಆರ್. ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದು, ಎರಡನೇ ನಾಯಕನ ಪಾತ್ರದಲ್ಲೂ ನಟಿಸಿದ್ದಾರೆ. ಅವರೊಬ್ಬರನ್ನು ಹೊರತುಪಡಿಸಿದರೆ ಉಳಿದ ತಾರಾಗಣದಲ್ಲಿ ಬಹುತೇಕರು ಹೊಸಬರೇ. ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಪರಿಣಿತ ಹೊಂದಿರುವ ಅನಿಲ್ ಸಿ.ಆರ್. ಅವರಿಗೆ ಅಸ್ಥಿರ ನಾಯಕನಾಗಿ ಮೊದಲ ಸಿನಿಮಾ. ಅವರೇ ಈ ಚಿತ್ರಕ್ಕೆ ಕಥೆಯನ್ನೂ ಕೊಟ್ಟಿದ್ದು, ವಿರಾಜ್ ಫಿಲಂ ರೆಕಾರ್ಡಿಂಗ್ ಸ್ಟುಡಿಯೋ ಬ್ಯಾನರ್ನಲ್ಲಿ ತಾವೇ ನಿರ್ಮಿಸುತ್ತಿದ್ದಾರೆ.
ಚಿತ್ರದಲ್ಲಿ ಅನಿಲ್ ಮತ್ತು ಪ್ರಮೋದ್ಗೆ ಮೂವರು ನಾಯಕಿಯರು. ಕಾಲೇಜು ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾವೇರಿ ಮೊದಲ ನಾಯಕಿಯಾಗಿದ್ದು, ಆಕೆಯ ಗೆಳತಿಯರ ಪಾತ್ರದಲ್ಲಿ ಹುಬ್ಬಳ್ಳಿ ಮೂಲದ ಭುವನ ಹಾಗೂ ಗುಬ್ಬಿಯ ಹರಿಣಿ ಎರಡನೇ ಹಾಗೂ ಮೂರನೇ ನಾಯಕಿಯರಾಗಿದ್ದಾರೆ. ವಿಶೇಷ ಎಂದರೆ ಕಲಾವಿದರ ಮೂಲ ಹೆಸರನ್ನೇ ಆಯಾ ಪಾತ್ರಗಳಿಗೆ ಬಳಸಿಕೊಳ್ಳಲಾಗಿದೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಹಾಗೂ ಎರಡು ಲಿರಿಕಲ್ ಹಾಡುಗಳ ಬಿಡುಗಡೆ ಮಾಡಲಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಬಾ.ಮ. ಹರೀಶ್, ಚಿತ್ರದ ಪೋಸ್ಟರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು.
ಸ್ಥಿರವಲ್ಲದ್ದನ್ನು ಅಸ್ಥಿರ ಎಂದು ಕರೆಯುವುದುಂಟು. ಅದೇ ರೀತಿ ಮನಸ್ಥಿತಿ ಇಲ್ಲದಿರುವ ವ್ಯಕ್ತಿಯು ಪ್ರೀತಿಯಲ್ಲಿ ಸೋತಾಗ ಸಾಮಾನ್ಯ ಹುಡುಗನಾದವನು ಯಾವ ರೀತಿ ಇರುತ್ತಾನೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಈ ತ್ರಿಕೋನ ಪ್ರೇಮಕಥೆಯನ್ನು ಬನ್ನೂರು, ಕುಮಟಾ, ಹೊನ್ನಾವರ ಸೇರಿದಂತೆ ಕಾಡಿನಲ್ಲೂ ಚಿತ್ರೀಕರಣ ಮಾಡಲಾಗಿದೆಯಂತೆ. ಟ್ರಯಾಂಗಲ್ ಲವ್ಸ್ಟೋರಿ ಜತೆಗೆ ಥ್ರಿಲ್ಲರ್, ಸಸ್ಪೆನ್ಸ್ ಅಂಶಗಳೂ ಚಿತ್ರದಲ್ಲಿವೆ. ಚಿತ್ರದ ನಾಲ್ಕು ಹಾಡುಗಳಿಗೆ ಸಿದ್ದು ಅರಸು ಸಾಹಿತ್ಯ ಬರೆದಿದ್ದು, ನಿತಿನ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ವಿನೋದ್ ಆರ್ ಛಾಯಾಗ್ರಹಣ, ಆಯುರ್ಸ್ವಾಮಿ ಸಂಕಲನ, ಗಣೇಶ್ ಸಾಹಸ ನಿರ್ದೇಶನವಿದೆ. ಸದ್ಯ 'ಅಸ್ಥಿರ' ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬಿಜಿಯಿದ್ದು ನವೆಂಬರ್ನಲ್ಲಿ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.