

ಬದುಕಿನಲ್ಲಿ ಒಮ್ಮೆಯಾದರೂ ಎಲ್ಲರ ಎದೆಗೂಡಿನಲ್ಲಿ ಅರಳುವ ಪ್ರೇಮ ಒಂದು ಮಧುರ ಕ್ಷಣ. ಪ್ರೇಮ ನಿವೇದನೆಯ ತಲ್ಲಣಗಳು, ಅದಕ್ಕೆ ಬರುವ ಸಕಾರಾತ್ಮಕ ಪ್ರತಿಕ್ರಿಯೆ... ಅದರ ಪರಿಣಾಮವಾಗಿ ಉಂಟಾಗುವ ಉಲ್ಲಾಸ ಇನ್ನಷ್ಟು ಮಧುರ. ಆ ದಿನಗಳ ವಿರಹವೂ ಮಧುರ ಯಾತನೆಯೇ. ಅವೆಲ್ಲವನ್ನೂ ದಾಟಿ ಮದುವೆ ಎಂಬಲ್ಲಿಗೆ ಬಂದು ನಿಂತರೆ ಅದೇ ದೊಡ್ಡ ಖುಷಿ. ಮದುವೆಯ ನಂತರವೂ ಪ್ರೀತಿ ತಾಜಾ ಆಗಿಯೇ ಉಳಿದರಂತೂ ಅದು ಅಮರಪ್ರೇಮ. ಅಂಥ ಪ್ರೇಮದ ಬಗ್ಗೆ ಬರೆದು ಕಳಿಸಿ ಎಂದು ‘ವಿಜಯವಾಣಿ’ ನೀಡಿದ್ದ ಕರೆಗೆ ಸಾವಿರಾರು ಓದುಗರು ಸ್ಪಂದಿಸಿದ್ದಾರೆ. ಆಯ್ದ ಯಶಸ್ವೀ ನೈಜ ಪ್ರೇಮಕಥೆಗಳು ಇಲ್ಲಿವೆ.
ಅವಳ ವಾರೆಗಣ್ಣ ನೋಟಕ್ಕೆ ನಾನು ಸೋತು ಶರಣಾಗಿ ಇದೇ ಮಾರ್ಚ್ 23ಕ್ಕೆ 11 ವರ್ಷ. ನನ್ನ ಮೃಗೀಯ ಮನಸ್ಸನ್ನು ಮೃದುಗೊಳಿಸಿ ಪ್ರೀತಿಯ ಸವಿಯನ್ನು ಉಣಬಡಿಸಿದವಳು ಆಕೆ. ನಾವಿಬ್ಬರೂ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆವು. ನಾನು ಲೆಕ್ಕಾಧಿಕಾರಿಯಾಗಿದ್ದೆ. ಅವಳು ಆಪ್ತ ಸಮಾಲೋಚಕಿ. ಇಬ್ಬರ ಕಣ್ಣನೋಟ ಒಂದಾಗಿ ಪ್ರೀತಿ ನಿವೇದಿಸಿಕೊಂಡೆವು. ಸುಮಾರು 5 ವರ್ಷ ಜಗತ್ತೇ ಸ್ವರ್ಗದ ರೀತಿಯಲ್ಲಿ ಕಾಣುತ್ತಿತ್ತು. ನಮ್ಮ ಪ್ರೀತಿಯು ಮದುವೆಯ ಮೂಲಕ ಯಶ ಕಾಣಬೇಕು ಎಂಬುದು ನಮ್ಮಅಭಿಲಾಷೆಯಾಗಿತ್ತು. ಒಂದು ದಿನ ನಾನು ನನ್ನ ಹೆತ್ತವರ ಮುಂದೆ ಪ್ರೀತಿಯ ವಿಷಯ ತಿಳಿಸಿದೆ. ಒಪ್ಪಲಿಲ್ಲ. ಒಂದು ಕ್ಷಣ ನನಗೂ ಅವಳಿಗೂ ಜೀವನದ ಆಸೆಯ ಗೋಪುರವೇ ಮುರಿದು ಬಿದ್ದಂಥ ಅನುಭವ. ದಿನ ಕಳೆದವು. ನನ್ನ ದೃಢ ನಿರ್ಧಾರವನ್ನು ಮತ್ತೊಮ್ಮೆ ಹೆತ್ತವರಿಗೆ ಹೇಳಿದೆ. ಕೊನೆಗೂ ನನ್ನ ಜೀವನದಲ್ಲಿ ಮಿಂಚು ಹುಳುವಿನ ಹಾಗೆ ಬಂದು ನನ್ನ ಜೀವನದಲ್ಲಿ ಬೆಳಕು ಮೂಡಿತು. ಆ ಬೆಳಕೇ ನನ್ನ ಮನೆಯ ಹಾಗೂ ಮನಸ್ಸಿನ ನಂದಾದೀಪವಾಗಿದೆ.
| ಶಿವಯೋಗಿ ಮತ್ತು ಮಾನಸ ಕೆ.ಸಿ.