

ಬೆಂಗಳೂರು:
"ಓ..' ಎಂಬ ಹಾರರ್ ಚಿತ್ರ ನಿರ್ದೇಶಿಸಿದ್ದ ಮಹೇಶ್ ಸಿ. ಅಮ್ಮಳ್ಳಿ ದೊಡ್ಡಿ ಆ್ಯಕ್ಷನ್&ಕಟ್ ಹೇಳಿರುವ ಹೊಸ ಸಿನಿಮಾ "ಲವ್'. ಹೆಸರೇ ಹೇಳುವಂತೆ ಇದೊಂದು ಪ್ರೇಮಕಥೆಯ ಸಿನಿಮಾ. "ಇದು ನೈಜ ಟನೆಗಳಿಂದ ಪ್ರೇರಿತವಾದ ಸೂಕ್ಷ್ಮ ಕಥೆಯಿರುವ ಚಿತ್ರ. ಹಿಂದು ಹುಡುಗ, ಮುಸ್ಲಿಂ ಹುಡುಗಿಯ ನಡುವಿನ ಪ್ರೀತಿಗೆ ಮನೆಯವರು, ಇಡೀ ಸಮಾಜ ಎದುರು ನಿಂತಾಗ ಏನಾಗುತ್ತದೆ ಎಂಬುದು ಚಿತ್ರದ ಕಥೆ' ಎಂದು ಮಾಹಿತಿ ನೀಡುತ್ತಾರೆ ಮಹೇಶ್.
ಪ್ರಜಯ್ ಜಯರಾಮ್ ನಾಯಕನಾಗಿದ್ದು, ವೃಷ ಪಾಟೀಲ್ ಅವರಿಗೆ ನಾಯಕಿಯಾಗಿದ್ದಾರೆ. ಇಬ್ಬರಿಗೂ ಇದು ಚೊಚ್ಚಲ ಸಿನಿಮಾ. "ಕಾಂತಾರ' ಖ್ಯಾತಿಯ ಪ್ರಭಾಕರ್ ಕುಂದರ್ ಬ್ರಹ್ಮಾವರ, ಸತೀಶ್ ಸೇರಿ ಉಮೇಶ್ ಶ್ರೀಕಾಂತ್ ತೇಲಿ, ರಾಧಿಕಾ ಭಟ್, ತಿಲಕ, ಪ್ರಸಾದ್ ಭಟ್, ಹರೀಶ್ ಶೆಟ್ಟಿ, ಸೌರಭ್ ಶಾಸ್ತ್ರೀ, ರಜತ್ ತಾರಾಗಣದಲ್ಲಿದ್ದಾರೆ.
ಚಿತ್ರಕ್ಕೆ ಸಿದ್ಧಾರ್ಥ್ ಛಾಯಾಗ್ರಹಣ, ರೋಸಿತ್ ವಿಜಯನ್ ಮತ್ತು ಶ್ರೀ ಸಾಯಿಕಿರಣ್ ಸಂಗೀತ, ಲೋಕೇಶ್ ಸಂಕಲನವಿರಲಿದೆ. ಬೆಂಗಳೂರು, ಉಡುಪಿ, ಕೋಟ, ಕುಂದಾಪುರ, ಬೈಂದೂರ್, ಬಾಗಲಕೋಟೆ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಸೆ. 15ರಂದು ಸಿನಿಮಾ ಬಿಡುಗಡೆಯಾಗಲಿದೆ.