ಲವ್​​​ ಫೇಲ್ಯೂರ್​, ಸ್ನೇಹಿತರಿಂದ ದ್ರೋಹ, ಸಾಲ, ಮೆಡಿಸಿನ್... ವಿಶಾಲ್​ ಬಗ್ಗೆ ಹೊರಬಿತ್ತು ಸ್ಫೋಟಕ ಸಂಗತಿ! Actor Vishal

Actor Vishal
Published on

Actor Vishal : ಇತ್ತೀಚೆಗೆ ಕಾಲಿವುಡ್​ ನಟ ವಿಶಾಲ್ ಅವರು ಭಾರಿ ಸುದ್ದಿಯಲ್ಲಿದ್ದಾರೆ. ಅವರ ಆರೋಗ್ಯದ ವಿಚಾರ ತುಂಬಾನೇ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ಕಳೆದ ಎರಡು ದಿನಗಳಿಂದ ವೈರಲ್​ ಆಗುತ್ತಿರುವ ಅವರ ವಿಡಿಯೋ. ಮೊನ್ನೆಯಷ್ಟೇ ತಮ್ಮ ಬಹುನಿರೀಕ್ಷಿತ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ವಿಶಾಲ್​ ಆಗಮಿಸಿದ್ದರು. ಈ ವೇಳೆ ವಿಶಾಲ್​ ಸ್ಥಿತಿಯನ್ನು ಕಂಡು ಎಲ್ಲರೂ ಶಾಕ್​ ಆದರು. ಏಕೆಂದರೆ, ವಿಶಾಲ್‌ಗೆ ನೇರವಾಗಿ ನಡೆಯಲು, ಸರಿಯಾಗಿ ಮಾತನಾಡಲು ಅಥವಾ ಮೈಕ್​ ಅನ್ನು ಹಿಡಿದುಕೊಳ್ಳಲು ಸಹ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ವಿಶಾಲ್​ಗೆ ಏನಾಯಿತು ಎಂಬ ಚರ್ಚೆ ಶುರುವಾಯಿತು.

ವಿಶಾಲ್ ಅವರು 12 ವರ್ಷಗಳ ಹಿಂದೆ ಮದಗಜರಾಜ ಎಂಬ ಚಿತ್ರದಲ್ಲಿ ನಟಿಸಿದ್ದರು. 2013ರ ಪೊಂಗಲ್‌ಗೆ ಈ ಚಿತ್ರ ಬಿಡುಗಡೆಯಾಗಬೇಕಿತ್ತು, ಆದರೆ ಕಾರಣಾಂತರಗಳಿಂದ ಅದು ಮುಂದೂಡಲ್ಪಟ್ಟಿತು. ಇದೀಗ 12 ವರ್ಷಗಳ ನಂತರ ಪೊಂಗಲ್‌ಗೆ ಚಿತ್ರ ತೆರೆಕಾಣುತ್ತಿದೆ. ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಸುಂದರ್​ ಸಿ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ವರಲಕ್ಷ್ಮೀ ಶರತ್​ಕುಮಾರ್​, ಅಂಜಲಿ ಹಾಗೂ ಸಂತಾನಮ್​ ಸೇರಿದಂತೆ ಪ್ರಮುಖ ಕಲಾವಿದರು ನಟಿಸಿದ್ದಾರೆ.

ಮೊನ್ನೆ ಚೆನ್ನೈನಲ್ಲಿ ಚಿತ್ರದ ಪತ್ರಿಕಾಗೋಷ್ಠಿ ಚೆನ್ನೈನಲ್ಲಿ ನಡೆಯಿತು. ಈ ವೇಳೆ ನಟ ವಿಶಾಲ್, ನಿರ್ದೇಶಕ ಸುಂದರ್​ ಸಿ ಸೇರಿದಂತೆ ಅನೇಕ ಮಂದಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿಶಾಲ್ ಅವರು ಮೈಕ್ ಹಿಡಿಯಲು ಸಾಧ್ಯವಾಗದೆ ನಡುಗುವ ಕೈಗಳಿಂದಲೇ ತೊದಲುತ್ತಾ ಮಾತನಾಡಿದರು. ಅಲ್ಲದೆ, ಅವರ ದೇಹ ತುಂಬಾ ತೆಳ್ಳಗೆ ಕಾಣುತ್ತಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿ ಅಭಿಮಾನಿಗಳು ಶಾಕ್​ ಆಗಿದ್ದರು ಮತ್ತು ವಿಶಾಲ್​ಗೆ ಏನಾಗಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿದರು.

ಇದರ ಬೆನ್ನಲ್ಲೇ ಚೆನ್ನೈನ ಅಪೋಲೋ ಆಸ್ಪತ್ರೆ ವಿಶಾಲ್ ಆರೋಗ್ಯದ ಬಗ್ಗೆ ವರದಿ ನೀಡಿತು. ಅದರ ಪ್ರಕಾರ ನಟ ವಿಶಾಲ್​ಗೆ ವೈರಲ್ ಜ್ವರ ಇದೆ ಎಂದು ಗೊತ್ತಾಯಿತು. ಸೂಕ್ತ ಚಿಕಿತ್ಸೆ ಹಾಗೂ ಸಂಪೂರ್ಣ ವಿಶ್ರಾಂತಿಯನ್ನು ಪಡೆಯಲು ವೈದ್ಯಾಧಿಕಾರಿಗಳು ಸೂಚಿಸಿದ್ದಾರೆಂದು ತಿಳಿದುಬಂತು. ಇದರಿಂದ ಅಭಿಮಾನಿಗಳು ಸಹ ನಿಟ್ಟುಸಿರು ಬಿಟ್ಟರು. ಜ್ವರ ಎಂದು ಸ್ಪಷ್ಟನೆ ನೀಡಿದರೂ ಕೂಡ ಬೇರೆ ಯಾವುದೋ ಕಾಯಿಲೆಯಿಂದ ವಿಶಾಲ್​ ಬಳಲುತ್ತಿದ್ದಾರೆ ಎಂಬ ವದಂತಿ ಕೂಡ ಹರಿದಾಡುತ್ತಿದೆ. ಇದರ ನಡುವೆ ತಮಿಳುನಾಡಿನ ಚಿತ್ರ ವಿಮರ್ಶಕ ಹಾಗೂ ಪತ್ರಕರ್ತ ಚಿಯಾರು ಬಾಲು ನೀಡಿರುವ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿವೆ.

ವಿಶಾಲ್​ ಅವರು ಒತ್ತಡ ಮತ್ತು ಉದ್ವೇಗಕ್ಕೆ ಒಳಗಾಗಿ ಅದರಿಂದ ಹೊರ ಬರಲು ಸಾಕಷ್ಟು ಔಷಧಿಯನ್ನು ತೆಗೆದುಕೊಳ್ಳುತ್ತಿರಬಹುದು. ಈ ಹಿಂದೆ ವಿಶಾಲ್​ನನ್ನು ಒಮ್ಮೆ ಭೇಟಿಯದಾಗ ಒತ್ತಡಕ್ಕೆ ಸಾಕಷ್ಟು ಔಷಧಿ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದರು. ಆದರೆ, ಆ ಸಮಯದಲ್ಲಿ ನಾನು ಅದನ್ನು ಗಟ್ಟಿಯಾಗಿ ಹೇಳಲಿಲ್ಲ. ಸಾಲಗಳು, ವಿಫಲವಾದ ಪ್ರೀತಿ, ಸ್ನೇಹಿತರಿಂದ ಮೋಸ ಮತ್ತು ಅವರ ಚಿತ್ರಗಳ ಸೋಲು ಅವರನ್ನು ಕಾಡುತ್ತಿರಬೇಕು. ಸ್ಟಾರ್​ ಆದರೂ ವಿಶಾಲ್​ ಕೂಡ ಮನುಷ್ಯರೇ ತಾನೆ. ತನ್ನ ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ವಿಶಾಲ್​ ಅವರು ಸ್ಟಿರಾಯ್ಡ್ ಬಳಸುತ್ತಿರಬಹುದು ಎಂದು ಚಿಯಾರು ಬಾಲು ಅವರು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ವಿಶಾಲ್ ಅವರು ನಿರ್ದೇಶಕ ಬಾಲ ನಿರ್ದೇಶನದ ಅವನ್​ ಇವನ್​ ಸಿನಿಮಾದಲ್ಲಿ ಓರೆಗಣ್ಣಿನ ವ್ಯಕ್ತಿಯಾಗಿ ನಟಿಸಿದ್ದಾರೆ. ಇದಕ್ಕಾಗಿ ವಿಶಾಲ್​ ಅವರು ನಿರ್ದೇಶಕರ ಬಲವಂತದಿಂದ ಕಣ್ಣಿನ ಆಪರೇಷನ್​ಗೆ ಒಳಗಾಗಿದ್ದರು. ಇದರ ನಂತರ ಕಣ್ಣಿನ ಸಮಸ್ಯೆಗಳು ಶುರುವಾಯಿತು. ದೃಷ್ಟಿಯು ಕೂಡ ಮಂಜಾಯಿತು. ಹೀಗಾಗಿ ವಿಶಾಲ್​ ಅವರು ಹೆಚ್ಚಿನ ಶಕ್ತಿಯ ಕನ್ನಡಕವನ್ನು ಧರಿಸಲು ಶುರು ಮಾಡಿದರು. ವಿಶಾಲ್​ ಕಣ್ಣುಗಳಿಂದ ಆಗಾಗ ನೀರು ಸುರಿಯುತ್ತದೆ. ಇದು ಖಂಡಿತ ಜ್ವರವಲ್ಲ. ಜ್ವರವಾಗಿದ್ದರೆ, ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ವೈದ್ಯರು ಖಂಡಿತ ಅನುಮತಿ ನೀಡುತ್ತಿರಲಿಲ್ಲ. ವಿಶಾಲ್​ಗೆ ಬೇರೇನೋ ಸಮಸ್ಯೆ ಇದೆ. ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಚಿಯಾರು ಬಾಲು ಹೇಳಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ವಿಶಾಲ್​ ನಟನೆಯ ರತ್ನಂ ಸಿನಿಮಾ ಕೊನೆಯದಾಗಿ ಬಿಡುಗಡೆಯಾಯಿತು. ಮದಗಜರಾಜ ಸಿನಿಮಾ ಜನವರಿ 12ಕ್ಕೆ ತೆರೆಗೆ ಅಪ್ಪಳಿಸಲಿದೆ. ತುಪ್ಪರಿವಾಲನ್​ 2 ಸಿನಿಮಾದಲ್ಲಿಯೂ ವಿಶಾಲ್​ ನಟಿಸಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net