ಧನಂಜಯ ಅಭಿನಯ-ನಿರ್ಮಾಣದ ಹೆಡ್​ಬುಷ್​ಗೆ ಲೂಸ್ ​ಮಾದ ಯೋಗಿ ಎಂಟ್ರಿ

Head Bush
Published on

ಬೆಂಗಳೂರು: ‘ಲೂಸ್ ಮಾದ’ ಖ್ಯಾತಿಯ ಯೋಗಿ ಅಭಿನಯದ ‘ಲಂಕೆ’, ‘ಒಂಭತ್ತನೇ ದಿಕ್ಕು’, ‘ನಾನು ಅದು ಮತ್ತು ಸರೋಜ’ ಸೇರಿ ಮೂರ್ನಾಲ್ಕು ಸಿನಿಮಾಗಳಿವೆ. ಇವೆಲ್ಲವೂ ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳು. ಇದಲ್ಲದೆ ಮುಂದೇನು? ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಧನಂಜಯ್ ಅಭಿನಯದ ಮತ್ತು ನಿರ್ವಣದ ‘ಹೆಡ್-ಬುಷ್’ ಚಿತ್ರದಲ್ಲಿ ಯೋಗಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಧನಂಜಯ್ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ, ‘ಲಂಕೆ’ ಚಿತ್ರದ ಆಡಿಯೋ ಬಿಡುಗಡೆಗೆ ಬಂದಿದ್ದ ಧನಂಜಯ್ ಈ ವಿಷಯವನ್ನು ಘೋಷಿಸಿದ್ದಾರೆ. ‘ಯೋಗಿ ನನ್ನ ಒಳ್ಳೆಯ ಸ್ನೇಹಿತ. ನಾವಿಬ್ಬರೂ ಒಂದು ಚಿತ್ರ ಒಟ್ಟಿಗೆ ಮಾಡುತ್ತಿದ್ದೇವೆ. ‘ಹೆಡ್-ಬುಷ್’ ಚಿತ್ರದಲ್ಲಿ ಅವರೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪಾತ್ರ ಪರಿಚಯವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಬೇಕು ಎಂಬ ಆಸೆ ಇತ್ತು. ಅವರೇ ಒಂದೆರಡು ಕಡೆ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿಬಿಟ್ಟಿದ್ದಾರೆ. ಹಾಗಾಗಿ, ಹೇಳಬೇಕಾಗಿ ಬಂದಿದೆ. ಅವರೊಬ್ಬ ನೈಜ ನಟ. ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಸಲ್ಲಿಸುತ್ತಾರೆ. ‘ಹೆಡ್-ಬುಷ್’ನಲ್ಲೂ ಅವರಿಗೊಂದು ಒಳ್ಳೆಯ ಪಾತ್ರ’ವಿದೆ ಎಂದು ಹೇಳಿದ್ದಾರೆ. ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ನಾಯಕಿಯಾಗಿ ಪಾಯಲ್ ರಜಪೂತ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಶೂನ್ಯ ನಿರ್ದೇಶಿಸುತ್ತಿದ್ದು, ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ‘ಅಗ್ನಿ’ ಶ್ರೀಧರ್ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net