

ತಮಿಳುನಾಡು: ಕಾಲಿವುಡ್ ಅಂಗಳದಲ್ಲಿ ಬಿಡುಗಡೆಗೊಂಡು, ಜಾಗತಿಕವಾಗಿ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ದಾಖಲೆಯನ್ನು ಬರೆದ 'ಜೈಲರ್' ಚಿತ್ರದ ಬಳಿಕ ಸೂಪರ್ಸ್ಟಾರ್, ನಟ ರಜನಿಕಾಂತ್ ಅವರ ಮುಂದಿನ ಚಿತ್ರದ ನಿರ್ದೇಶಕರು ಯಾರು ಎಂಬ ಮಾಹಿತಿಯನ್ನು ಚಿತ್ರತಂಡ ಇಂದು ಅಧಿಕೃತವಾಗಿ ಘೋಷಿಸಿದೆ.
ನೆಲ್ಸನ್ ದಿಲೀಪ್ಕುಮಾರ್ ಮತ್ತು ತಲೈವಾ ರಜನಿಕಾಂತ್ ಕಾಂಬಿನೇಷನ್ನಲ್ಲಿ ತೆರೆಗೆ ಅಪ್ಪಳಿಸಿದ 'ಜೈಲರ್' ಭರ್ಜರಿ ಯಶಸ್ಸನ್ನು ಪಡೆದುಕೊಳ್ಳುವುದರ ಜತೆಗೆ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷೆಗೂ ಮೀರಿದ ಗಳಿಕೆಯನ್ನು ಕಂಡಿತು. ಸದ್ಯ ಈ ಖುಷಿಯಲ್ಲಿದ್ದ ಸೂಪರ್ಸ್ಟಾರ್ ಅಭಿಮಾನಿಗಳು, ರಜನಿಕಾಂತ್ ಅವರ ಮುಂದಿನ ಚಿತ್ರದ ಬಗ್ಗೆ ತೀವ್ರ ಕುತೂಹಲ ವ್ಯಕ್ತಪಡಿಸಿದ್ದರು. ಇದಕ್ಕೆ ಇಂದು ಅಧಿಕೃತ ಅಪ್ಡೇಟ್ವೊಂದು ದೊರೆತಿದೆ.
ನಟ ರಜನಿಕಾಂತ್ ಅವರ ಮುಂಬರುವ 'ತಲೈವರ್ 171' ನಿರ್ದೇಶನದ ಜವಾಬ್ದಾರಿಯನ್ನು 'ಲಿಯೋ' ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ತೆಗೆದುಕೊಂಡಿದ್ದಾರೆ ಎಂದು ಸನ್ ಪಿಕ್ಷರ್ಸ್ ಅಧಿಕೃತವಾಗಿ ತಿಳಿಸಿದೆ. ಸದ್ಯ ದಳಪತಿ ವಿಜಯ್ ನಟನೆಯ ಲಿಯೋ ಚಿತ್ರದ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ನಿರತರಾಗಿರುವ ನಿರ್ದೇಶಕ, ರಜನಿಕಾಂತ್ ಅವರ ಮುಂದಿನ ಚಿತ್ರವನ್ನು ನಿರ್ದೇಶಿಸಲು ಸನ್ನದ್ಧರಾಗಿದ್ದಾರೆ,(ಏಜೆನ್ಸೀಸ್).