ನಾವು ಸೈಲೆಂಟ್​ ಆಗಿರೋದೆ, ಅವರಿಗೆ ಕೊಡೋ ದೊಡ್ಡ ಗೌರವ ...

Vidya - Sushant - Final
Published on

ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ನಂತರ ಬಾಲಿವುಡ್​ನಲ್ಲಿ ವಿಧವಿಧವಾದ ಚಚೆರ್ಗಳು ಆಗುತ್ತಿವೆ. ಅಷ್ಟೇ ಅಲ್ಲ, ಇದರಿಂದ ಹಿಂದಿ ಚಿತ್ರರಂಗ ಹೋಳಾಗಿದೆ. ಪ್ರತಿಯೊಬ್ಬರೂ ಅವರಿಗೆ ಇಷ್ಟ ಬಂದಂತೆ ಮಾತನಾಡುತ್ತಲೇ ಇದ್ದಾರೆ.

ಇಷ್ಟೆಲ್ಲಾ ಆಗುತ್ತಿದ್ದರೂ, ವಿದ್ಯಾ ಬಾಲನ್​ ಮಾತ್ರ ಈ ಚರ್ಚೆಯಲ್ಲಿ ಇದುವರೆಗೂ ಪಾಲ್ಗೊಂಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಅವರು ಒಂದಿಷ್ಟು ವಿಷಯಗಳನ್ನು ಹೇಳಿಕೊಂಡಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಸುಶಾಂತ್​ ಆತ್ಮಹತ್ಯೆ ವಿಚಾರವಾಗಿ ಸುಮ್ಮನೆ ಮಾತನಾಡುವುದು ತಪ್ಪು. ಏಕೆಂದರೆ, ಅವರ ಮನಸ್ಸಿನಲ್ಲೇನಿತ್ತು ಮತ್ತು ಅವರು ಇಂಥದ್ದೊಂದು ನಿರ್ಧಾರಕ್ಕೆ ಯಾಕೆ ಬಂದರು ಎಂಬುದು ಯಾರಿಗೂ ಗೊತ್ತಿಲ್ಲ' ಎಂದು ಅವರು ಹೇಳಿದ್ದಾರೆ.

'ಈ ಸಂದರ್ಭದಲ್ಲಿ ನಾವು ಮೌನವಾಗಿದ್ದು ಅವರಿಗೆ ಗೌರವ ಸಲ್ಲಿಸಬೇಕೇ ಹೊರತು, ಏನೇನೋ ಮಾತಾಡಿ ಈ ಪ್ರಕರಣವನ್ನು ಇನ್ನಷ್ಟು ಜಟಿಲ ಮಾಡಬಾರದು. ಜನ ಹೊರಗೆ ಏನೇನೋ ಮಾತಾಡುತ್ತಿದ್ದಾರೆ. ಆದರೆ, ನಿಜಕ್ಕೂ ಒಳಗೇ ಅಳುತ್ತಿರುವವರು ಅವರ ಹತ್ತಿರದವರು' ಎಂದು ವಿದ್ಯಾ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಸ್ವಜನಪಕ್ಷಪಾತದ ಕುರಿತು ಮಾತನಾಡಿರುವ ಅವರು, 'ನಾನು ಚಿತ್ರರಂಗದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದೇನೆ. ನೆಪೋಟಿಸಂ ಎಂಬುದು ಇಲ್ಲವೇ ಇಲ್ಲ ಎಂದು ಹೇಳುವುದು ತಪ್ಪು. ಆದರೆ, ಅವೆಲ್ಲಾ ನನ್ನ ದಾರಿಗೆ ಅಡ್ಡ ಬರುವುದಕ್ಕೆ ನಾನ್ಯಾವತ್ತೂ ಬಿಟ್ಟಿಲ್ಲ. ಶ್ರದ್ಧೆಯಿಂದ ನನ್ನ ಕೆಲಸ ಮಾಡಿಕೊಂಡು ಹೋದೆ' ಎಂದು ತಮಗಾಗ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾರೆ.

'ಬೇರೆಯವರಿಗೆ ಬೇರೆ ಸಮಸ್ಯೆಗಳಿರಬಹುದು. ಹಾಗಂತ ಸುಮ್ಮನಿರಬಾರದು. ತಮಗೆ ಆಪ್ತರಾದವರ ಜತೆಗೆ ಮಾತಾಡಿ, ಆ ಸಮಸ್ಯೆಯಿಂದ ಹೇಗೆ ಹೊರಬರಬಹುದು ಎಂಬುದನ್ನು ಅರಿತುಕೊಳ್ಳಬೇಕು' ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net