ದುಬಾರಿ ಸೆಟ್​ಗಳ ಸ್ಪರ್ಧೆ; ಕೋಟಿ ಕೋಟಿ ವೆಚ್ಚದಲ್ಲಿ ಸೆಟ್​ಗಳನ್ನು ನಿರ್ಮಿಸುತ್ತಿರುವ ತಂಡಗಳು

ASC
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಪ್ಯಾನ್​ ಇಂಡಿಯಾ ಪರಿಕಲ್ಪನೆ ವೇಗ ಪಡೆದ ಬಳಿಕ ಬಹುಕೋಟಿ ವೆಚ್ಚದ ಬಹುಭಾಷಾ ಸಿನಿಮಾಗಳ ಸಂಖ್ಯೆ ಹೆಚ್ಚಾಗಿದೆ. ಪ್ಯಾನ್​ ಇಂಡಿಯಾದಿಂದ ಪ್ಯಾನ್​ ವರ್ಲ್ಡ್​ಗೆ ಹೋಗಲು ಸ್ಟಾರ್​ಗಳು ಸಹ ನಾ ಮುಂದು ತಾ ಮುಂದು ಅಂತ ಸ್ಪರ್ಧೆಗಿಳಿದಿದ್ದಾರೆ. ಹೀಗಾಗಿಯೇ ಬಿಗ್​ಸ್ಕ್ರೀನ್​ ಮೇಲೆ ದೃಶ್ಯವೈಭವ ಸೃಷ್ಟಿಸಲು ವಿಎ್​ಎಕ್ಸ್​, ಸಿಜಿಐ, ಎಐ ಮಾತ್ರವಲ್ಲ ಕೋಟಿ ಕೋಟಿ ವೆಚ್ಚದಲ್ಲಿ ಸೆಟ್​ಗಳನ್ನೂ ನಿರ್ಮಿಸಲಾಗುತ್ತಿದೆ. ಮೊದಲೆಲ್ಲ ಒಂದೆರಡು ಕೋಟಿ ಸೆಟ್​ ಅಂದರೆ ಅಬ್ಬಾ ಎನ್ನುವ ಕಾಲವಿತ್ತು. ಇದೀಗ ಸೆಟ್​ಗಾಗಿಯೇ ನಿರ್ಮಾಪಕರು ಬರೋಬ್ಬರಿ 10 ಕೋಟಿ ರೂಪಾಯಿಯಿಂದ 50 ಕೋಟಿ ರೂಪಾಯಿವರೆಗೆ ಖರ್ಚು ಮಾಡುತ್ತಿದ್ದಾರೆ.

ವಿಶ್ವದ ಅತಿ ದೊಡ್ಡ ಸೆಟ್​!

ಪ್ರಭಾಸ್​, ಸಂಜಯ್​ ದತ್​ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಫ್ಯಾಂಟಸಿ ಹಾರರ್​ "ದ ರಾಜಾಸಾಬ್​' ಚಿತ್ರಕ್ಕಾಗಿ ಹೈದರಾಬಾದ್​ನಿಂದ 20 ಕಿಮೀ ದೂರದಲ್ಲಿರುವ ಅಜೀಜ್​ನಗರದಲ್ಲಿ ದೊಡ್ಡ ಸೆಟ್​ ನಿರ್ಮಿಸಲಾಗಿದೆ. ಚಿತ್ರತಂಡದ ಪ್ರಕಾರ ಇದು ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಅತಿ ದೊಡ್ಡ ಬಜೆಟ್​ನ ಹಾರರ್​ ಚಿತ್ರಕ್ಕೆ ವಿಶ್ವದ ಅತಿ ದೊಡ್ಡ ಒಳಾಂಗಣ ಸೆಟ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾರುತಿ ಆ್ಯಕ್ಷನ್​ -ಕಟ್​ ಹೇಳುತ್ತಿರುವ ಈ ಚಿತ್ರವನ್ನು ಪೀಪಲ್​ ಮೀಡಿಯಾ ಫ್ಯಾಕ್ಟರಿ ಬ್ಯಾನರ್​ನಲ್ಲಿ ಟಿ.ಜಿ. ವಿಶ್ವಪ್ರಸಾದ್​ ನಿರ್ಮಿಸುತ್ತಿದ್ದಾರೆ. ಕಲಾ ನಿರ್ದೇಶಕ ರಾಜೀವ್​ ನಂಬಿಯಾರ್​ ಅಜೀಜ್​ನಗರದಲ್ಲಿ ಬರೋಬ್ಬರಿ 38 ಸಾವಿರ ಚದರಡಿಯಲ್ಲಿ ಬೃಹತ್​ ಸೆಟ್​ ನಿರ್ಮಿಸಿದ್ದಾರೆ. ಎರಡು ಮಹಡಿಯ ಈ ಸೆಟ್​ ಒಂದು ಹಳೆಯ ಬಂಗಲೆ, ಲೈಬ್ರರಿ, ಅಡುಗಮನೆ, ಊಟದ ಮನೆ, ಟಾರ್ಚರ್​ ರೂಮ್​ಗಳನ್ನು ಒಳಗೊಂಡಿದೆ. ಸೆಟ್​ ಬಗ್ಗೆ ರಾಜೀವ್​, "ಕಳೆದ ನಾಲ್ಕರಿಂದ ಆರು ತಿಂಗಳಿನಿಂದ 1000ರಿಂದ 1200 ಜನ ಹಗಲು, ರಾತ್ರಿ ಎನ್ನದೆ ಕೆಲಸ ಮಾಡಿ ಈ ಬೃಹತ್​ ಸೆಟ್​ ನಿರ್ಮಿಸಿದ್ದಾರೆ. ವಿಶ್ವದಲ್ಲೇ ಅತಿ ದೊಡ್ಡ ಇನ್​ಡೋರ್​ ಸೆಟ್​ ಇದು' ಎಂದು ಹೇಳಿಕೊಳ್ಳುತ್ತಾರೆ. ಈಗಾಗಲೇ ಚಿತ್ರದ ಶೇಕಡಾ 90ರಷ್ಟು ಶೂಟಿಂಗ್​ ಪೂರ್ಣಗೊಂಡಿದ್ದು, "ದ ರಾಜಾಸಾಬ್​' ಇದೇ ಡಿ. 5ರಂದು ತೆರೆಗೆ ಬರಲಿದೆ.

10 ಕೋಟಿ ರೂಪಾಯಿಯ ಅನಂತಪದ್ಮನಾಭ ದೇವಸ್ಥಾನ

ವಿರಾಟ್​ ಕರ್ಣ, ನಭಾ ನಟೇಶ್​ ಮತ್ತು ಐಶ್ವರ್ಯಾ ಮೆನನ್​ ನಟಿಸುತ್ತಿರುವ ಅಭಿಷೇಕ್​ ನಾಮಾ ಆ್ಯಕ್ಷನ್​&ಕಟ್​ ಹೇಳುತ್ತಿರುವ ಪೌರಾಣಿಕ ಹಿನ್ನೆಲೆಯ ಸಿನಿಮಾ "ನಾಗಬಂಧಂ'. ಈ ಚಿತ್ರಕ್ಕಾಗಿ ಹೈದರಾಬಾದ್​ನ ರಾಮಾನಾಯ್ಡು ಸ್ಟುಡಿಯೋಸ್​ನಲ್ಲಿ "ಒಕ್ಕಡು', "ಆರುಂಧತಿ', "ಯಶೋದ' ಖ್ಯಾತಿಯ ಹಿರಿಯ ಕಲಾ ನಿರ್ದೇಶಕ ಅಶೋಕ್​ ಕುಮಾರ್​ 10 ಕೋಟಿ ರೂ. ಬಜೆಟ್​ನಲ್ಲಿ ಕೇರಳದ ಅನಂತಪದ್ಮನಾಭಸ್ವಾಮಿ ದೇವಾಲಯದ ಸೆಟ್​ ನಿರ್ಮಿಸಿದ್ದಾರೆ. ನೃತ್ಯನಿರ್ದೇಶಕ ಗಣೇಶ್​ ಆಚಾರ್ಯ ಸಂಯೋಜನೆಯಲ್ಲಿ ಬರೋಬ್ಬರಿ ಐದು ಸಾವಿರ ಡಾನ್ಸರ್​ಗಳ ಜತೆ ಈ ಸೆಟ್​ನಲ್ಲಿ ಒಂದು ಹಾಡು ಮತ್ತು 10 ನಿಮಿಷದ ಬಹುಮುಖ್ಯ ಸನ್ನಿವೇಶಗಳ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ.

50 ಕೋಟಿ ರೂ. ಸೆಟ್​ನಲ್ಲಿ ರಾಜ, ಬಾಬು

"ಆರ್​ಆರ್​ಆರ್​' ಯಶಸ್ಸಿನ ಬಳಿಕ ರಾಜಮೌಳಿ ಮತ್ತು "ಗುಂಟೂರು ಕಾರಂ' ಚಿತ್ರದ ನಂತರ ಮಹೇಶ್​ ಬಾಬು ಒಟ್ಟಿಗೆ ಸಿನಿಮಾ ಘೋಷಿಸಿರುವುದು ಗೊತ್ತಿದೆ. ಈ ಚಿತ್ರಕ್ಕಾಗಿ ಹೈದರಾಬಾದ್​ನಲ್ಲಿ ಬರೋಬ್ಬರಿ 50 ಕೋಟಿ ರೂ. ವೆಚ್ಚದಲ್ಲಿ ಬೃಹತ್​ ಸೆಟ್​ ನಿರ್ಮಿಸಲಾಗಿದೆ. ಕಾಶಿಯ ದೇವಸ್ಥಾನಗಳು, ಘಾಟ್​ಗಳನ್ನು ಮರುಸೃಷ್ಟಿಸಲಾಗಿದ್ದು, ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ದುಬಾರಿ ಸೆಟ್​ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

"ಟಾಕ್ಸಿಕ್​', "ಪಿನಾಕ' ಚಿತ್ರಗಳ ದುಬಾರಿ ಸೆಟ್​

ಯಶ್​ ನಟಿಸುತ್ತಿರುವ "ಟಾಕ್ಸಿಕ್​' ಚಿತ್ರಕ್ಕಾಗಿ 8.5 ಎಕರೆ ಜಾಗದಲ್ಲಿ ಲಂಡನ್​ ನಗರವನ್ನು ಹೋಲುವ ಬೃಹತ್​ ಸೆಟ್​ ನಿರ್ಮಿಸಲಾಗಿದೆ. ಹಾಗೇ ಗಣೇಶ್​ ನಟಿಸುತ್ತಿರುವ ಧನು ಮಾಸ್ಟರ್​ ಆ್ಯಕ್ಷನ್​-ಕಟ್​ ಹೇಳುತ್ತಿರುವ ಮೈಥಲಾಜಿಕಲ್​ ಹಾರರ್​ "ಪಿನಾಕ' ಚಿತ್ರದ ಶೂಟಿಂಗ್​ ಕೆಲ ದಿನಗಳಿಂದ ನೆಲಮಂಗದಲ್ಲಿ ನಡೆಯುತ್ತಿದ್ದು, ಅಲ್ಲಿ ಎಂಟು ಎಕರೆ ಜಾಗದಲ್ಲಿ ಸೆಟ್​ ನಿರ್ಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net