ಲಾಂಗ್ ಹಿಡ್ದು ನಡ್ಕೊಂಡು ಬಂದ್ರೆ ಲಂಕಾಸುರ ...

Lankasura (1)
Published on

ಬೆಂಗಳೂರು: ವಿನೋದ್​ ಪ್ರಭಾಕರ್​ ಅಭಿನಯದ 'ಲಂಕಾಸುರ' ಚಿತ್ರದ ಚಿತ್ರೀಕರಣವೆಲ್ಲ ಮುಗಿದು, ಚಿತ್ರ ಇದೀಗ ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದೆ. ಈ ಮಧ್ಯೆ, ಚಿತ್ರದ ಶೀರ್ಷಿಕೆ ಗೀತೆಯನ್ನು ಇತ್ತೀಚೆಗೆ ಯೂಟ್ಯೂಬ್​ನ ಎ2 ಮ್ಯೂಸಿಕ್​ ಚಾನಲ್​ನಲ್ಲಿ ಬಿಡುಗಡೆ ಮಾಡಲಾಗಿದೆ.

ನಿರ್ದೇಶಕ ಕಂ ಗೀತರಚನೆಕಾರ ಚೇತನ್ ಕುಮಾರ್ ಬರೆದಿರುವ 'ಅಣ್ಣ ಗನ್ ಹಿಡ್ದು ನಿಂತ ಅಂದ್ರೆ ಭಸ್ಮಾಸುರ ... ಲಾಂಗ್ ಹಿಡ್ದು ನಡ್ಕೊಂಡು ಬಂದ್ರೆ ಲಂಕಾಸುರ ... ಲಂಕಾಸುರ ಲಂಕಾಸುರ' ಎಂಬ ಈ ಟೈಟಲ್​ ಟ್ರಾಕ್​ ಈಗಾಗಲೇ ಒಂದು ಮಿಲಿಯನ್​ಗೂ ಅಧಿಕ ವೀಕ್ಷಣೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಟೈಟಲ್ ಟ್ರ್ಯಾಕ್​ಗೆ ಜನಮನ್ನಣೆ ದೊರಕುತ್ತಿರುವುದಕ್ಕೆ ವಿನೋದ್ ಪ್ರಭಾಕರ್ ಸಂತಸ ವ್ಯಕ್ತಪಡಿಸಿರುವುದರ ಜತೆಗೆ ಕನ್ನಡ ಕಲಾಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ವಿಜೇತ್ ಕೃಷ್ಣ ಈ ಹಾಡನ್ನು ಹಾಡಿ ಸಂಗೀತವನ್ನು ನೀಡಿದ್ದಾರೆ. ಮೋಹನ್ ಕುಮಾರ್ ನೃತ್ಯ ನಿರ್ದೇಶನ ಮಾಡಿರುವ ಈ ಹಾಡಿನಲ್ಲಿ ನಾಯಕ ವಿನೋದ್ ಪ್ರಭಾಕರ್ ಅಭಿನಯಿಸಿದ್ದಾರೆ. ಎಚ್.ಎಂ.ಟಿ, ಟೊರಿನೊ ಫ್ಯಾಕ್ಟರಿ ಹಾಗೂ ಮಲ್ಲೇಶ್ವರಂನ ದೋಬಿ ಘಾಟ್ ನಲ್ಲಿ ನಿರ್ಮಿಸಲಾಗಿದ್ದ ಆರು ಸೆಟ್​​ಗಳಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ.

ವಿನೋದ್ ಪ್ರಭಾಕರ್, ಟೈಗರ್ ಟಾಕೀಸ್ ಎಂಬ ಹೊಸ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಅದರಡಿ ಅವರ ಪತ್ನಿ ನಿಶಾ ವಿನೋದ್​ ಪ್ರಭಾಕರ್​ 'ಲಂಕಾಸುರ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರಮೋದ್ ಕುಮಾರ್ ಈ ಚಿತ್ರದ ನಿರ್ದೇಶಕರು. ಇದು ಪ್ರಮೋದ್​ ನಿರ್ದೇಶನದ ಮೊದಲ ಚಿತ್ರವಾಗಿದ್ದು, ಅವರೇ ಕಥೆ-ಚಿತ್ರಕಥೆ ರಚಿಸಿದ್ದಾರೆ.

'ಲಂಕಾಸುರ' ಚಿತ್ರದಲ್ಲಿ ವಿನೋದ್​ ಪ್ರಭಾಕರ್​ ಜತೆಗೆ 'ಲೂಸ್​ ಮಾದ' ಯೋಗಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಮಿಕ್ಕಂತೆ ದೇವರಾಜ್​, ರವಿಶಂಕರ್​ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net