Nachchinavaadu Review : ಹೀಗೊಂದು ವಿಭಿನ್ನ ಪ್ರೇಮಕಥೆ

WhatsApp Image 2023-09-22 at 4.26.30 PM
Published on

ಚಿತ್ರ : ನಚ್ಚಿನವಾಡು

ನಿರ್ದೇಶನ : ಲಕ್ಷ್ಮಣ್​ ಚಿನ್ನ

ತಾರಾಗಣ : ಲಕ್ಷ್ಮಣ್​ ಚಿನ್ನ, ಕಾವ್ಯಾ ರಮೇಶ್​, ದರ್ಶನ್​, ನಾಗೇಂದ್ರ ಅರಸು, ಲಲಿತಾ ನಾಯಕ್​, ಪ್ರೇರಣಾ, ಪ್ರವೀಣ್​ ಮುಂತಾದವರು.

ಆತ ಸಾಫ್ಟ್​ವೇರ್​ ಉದ್ಯೋಗಿ ಆನಂದ್​ (ಲಕ್ಷ್ಮಣ್​ ಚಿನ್ನ), ಯಾಂತ್ರಿಕ ಜೀವನದ ತಲೆಬಿಸಿಯ ನಡುವೆ ಮಗ ಆದಷ್ಟು ಬೇಗ ಆರ್ಥಿಕವಾಗಿ ಸೆಟಲ್​ ಆಗಬೇಕು, ಮದುವೆಯಾಗಿ ಹೊಸ ಜೀವನ ಪ್ರಾರಂಭಿಸಬೇಕೆಂಬುದು ಆತನ ಪಾಲಕರ ಆಸೆ. ಆದರೆ ಆನಂದ್​ಗೆ ಹುಡುಗಿಯನ್ನು ಆನ್​ಲೈನ್​ನಲ್ಲೋ ಅಥವಾ ಮದುವೆ ಬ್ರೋಕರ್​ ಮೂಲಕವೋ ಹುಡುಕಿ, ಮದುವೆಯಾಗುವ ಬದಲು, ಪ್ರೀತಿಸಿ ಮದುವೆಯಾಗುವ ಬಯಕೆ. ಈ ಗೊಂದಲಗಳ ನಡುವೆ ಅತನಿಗೆ ಸರಿಯಾದ ಹುಡುಗಿಯನ್ನು ಹುಡುಕಲು ಸಾಧ್ಯವಾಗುವುದಿಲ್ಲ. ಮನೆಯಲ್ಲಿ ಅಪ್ಪ, ಅಮ್ಮನ ಒತ್ತಡ ಹೆಚ್ಚಾಗುತ್ತಿರುತ್ತದೆ. ಅದರ ನಡುವೆಯೇ ಆನಂದ್​, ಯುವತಿಯನ್ನು ಭೇಟಿಯಾಗುತ್ತಾನೆ. ಮೊದಲ ನೋಟದಲ್ಲೇ ಆಕೆಯ ಮೇಲೆ ಪ್ರೀತಿ ಚಿಗುರುತ್ತದೆ. ಆಕೆಯನ್ನು ಒಲಿಸಿಕೊಳ್ಳಲು ಆನಂದ್ ಯಶಸ್ವಿಯಾಗುತ್ತಾನಾ? ಮದುವೆಯ ಕನಸು ನನಸಾಗುತ್ತಾ? ಲವ್​ಸ್ಟೋರಿ ಮ್ಯಾರೇಜ್ ಸ್ಟೋರಿಯಾಗುತ್ತಾ? ಅಥವಾ ಪಾಲಕರು ನೋಡಿದ ಯುವತಿಯನ್ನೇ ಮದುವೆಯಾಗಬೇಕಾಗುತ್ತಾ? ಎಂಬುದೇ 'ನಚ್ಚಿನವಾಡು' ಕಥೆ.

ಲವ್​ಸ್ಟೋರಿಗಳಿಗೇನೂ ಕೊರತೆಯಿಲ್ಲ. ಆದರೆ ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆಯುವುದು ಕಷ್ಟಸಾಧ್ಯ. ಆ ವಿಷಯದಲ್ಲಿ ಲಕ್ಷ್ಮಣ್​ ಚಿನ್ನ ಅಚ್ಚುಕಟ್ಟಾಗಿ ಪ್ರೇಮಕಥೆಯನ್ನು ಕಟ್ಟಿಕೊಡುವಲ್ಲಿ ಗೆದ್ದಿದ್ದಾರೆ. ಅಪರೂಪದ ಕಥೆ, ಲವ್​, ಸೆಂಟಿಮೆಂಟ್ ಹಾಗೂ ಸಂದೇಶ ಎಲ್ಲವನ್ನೂ ಜೋಡಿಸಿ ಸಿನಿಮಾ ರೂಪ ನೀಡಿದ್ದಾರೆ. ಆರಂಭದಲ್ಲಿ ಸಾಮಾನ್ಯ ಕಥೆ ಎನಿಸಿದರೂ, ಕೆಲವೊಂದು ತಿರುವುಗಳ ಮೂಲಕ ಚಿತ್ರಕಥೆಯಲ್ಲಿ ಗಟ್ಟಿತನ ಕಾಪಾಡಿಕೊಂಡಿದ್ದಾರೆ ಲಕ್ಷ್ಮಣ್. ಚಿತ್ರದಲ್ಲಿ ಸಾಫ್ಟ್‌ವೇರ್ ಉದ್ಯೋಗಿಯ ಯಾಂತ್ರಿಕ ಜೀವನದ ನಾನಾ ಮಜಲುಗಳ ದರ್ಶನವಾಗುತ್ತದೆ.

ಲಕ್ಷ್ಮಣ್ ಚಿನ್ನ ನಿರ್ದೇಶನದ ಜತೆಗೆ ನಾಯಕನಾಗಿಯೂ ಅಚ್ಚುಕಟ್ಟಾಗಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರಿಗೆ ನಾಯಕಿಯಾಗಿ ಕಾವ್ಯಾ ರಮೇಶ್ ಕೊಟ್ಟ ಪಾತ್ರವನ್ನು ನೀಟಾಗಿ ನಿಭಾಯಿಸುವಲ್ಲಿ ಸಫಲರಾಗಿದ್ದಾರೆ. ಉಳಿದಂತೆ ಕೆ.ದರ್ಶನ್, ನಾಗೇಂದ್ರ ಅರಸು, ಲಲಿತಾ ನಾಯಕ್, ಪ್ರೇರಣಾ ಭಟ್, ಎಆರ್‌ಪಿ ರೆಡ್ಡಿ, ಪ್ರವೀಣ್ ಮುಂತಾದವರು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅನಿರುದ್ಧ್ ಛಾಯಾಗ್ರಹಣ, ಮಿಜೋ ಜೋಸೆಫ್ ಹಾಡುಗಳು ಚಿತ್ರಕ್ಕೆ ಪೂರಕವಾಗಿದೆ. ಈಗಿನ ಯುವಪೀಳಿಗೆಗೆ ಹತ್ತಿರವಾಗುವಂತಹ ಅನೇಕ ವಿಷಯಗಳು ಸಿನಿಮಾದಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net