ಕೆಡಿ, ಟಾಕ್ಸಿಕ್​ ಮತ್ತು... ದೊಡ್ಡ ಸಾಹಸಕ್ಕೆ ಕೈಹಾಕಿದ ಕೆವಿಎನ್​ ಸಂಸ್ಥೆ ನಿಜಕ್ಕೂ ಯಶಸ್ವಿಯಾಗುತ್ತಾ? KVN Productions

KVN Productions
Published on

KVN Productions : ದೊಡ್ಡ ಬಜೆಟ್ ಚಿತ್ರಗಳಿಗೆ ಬಂಡವಾಳ ಹೂಡುತ್ತಿರುವ ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ, ತನ್ನ ಕುಸಿತದಿಂದ ಮತ್ತೆ ಪುಟಿದೇಳಲು ಪ್ರಯತ್ನಿಸುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್​ ಹೀರೋ ಚಿತ್ರಗಳನ್ನು ನಿರ್ಮಿಸುತ್ತಿರುವ ಈ ನಿರ್ಮಾಣ ಸಂಸ್ಥೆ, ನೆರೆಯ ಸಿನಿ ಉದ್ಯಮದ ಸ್ಟಾರ್ ನಾಯಕನ ಮೇಲೆ ನಂಬಿಕೆ ಇಟ್ಟು ಭಾರೀ ಬಂಡಳವನ್ನೇ ಹೂಡಿಕೆ ಮಾಡಿದೆ. ಈ ಕಂಪನಿ ಬ್ಯಾಕ್​-ಟು-ಬ್ಯಾಕ್ ಪ್ಯಾನ್-ಇಂಡಿಯನ್ ಚಿತ್ರಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಅಷ್ಟಕ್ಕೂ ಯಾವುದು ಆ ಸಿನಿಮಾ ನಿರ್ಮಾಣ ಸಂಸ್ಥೆ ಅಂತಿರಾ? ಅದೇ ಕೆವಿಎನ್ ಪ್ರೊಡಕ್ಷನ್ ಹೌಸ್. ಬಹಳ ಕಡಿಮೆ ಸಮಯದಲ್ಲಿ ಸ್ಯಾಂಡಲ್‌ವುಡ್‌ನ ಅತಿದೊಡ್ಡ ನಿರ್ಮಾಣ ಸಂಸ್ಥೆಯಾಗಿದೆ. ಪರಭಾಷೆ ಸಿನಿಮಾಗಳ ಕನ್ನಡ ವಿತರಣಾ ಹಕ್ಕುಗಳನ್ನು ಪಡೆಯುವ ಮೂಲಕ ಕರ್ನಾಟಕದಲ್ಲಿ ದೊಡ್ಡ ಬಜೆಟ್ ತೆಲುಗು ಚಿತ್ರಗಳನ್ನು ಬಿಡುಗಡೆ ಮಾಡಿದೆ. ಆರ್‌ಆರ್‌ಆರ್, ಸೀತಾರಾಮ್, ಕಲ್ಕಿ ಹಾಗೂ ದೇವರ ಸಿನಿಮಾಗಳು ಈ ಪಟ್ಟಿಯಲ್ಲಿವೆ. ಇತ್ತೀಚೆಗೆ, ಕೆವಿಎನ್, ತಮಿಳಿನ​ ಕಂಗುವಾ ಸಿನಿಮಾದ ವಿತರಣಾ ಹಕ್ಕುಗಳನ್ನು ತೆಗೆದುಕೊಂಡು ತನ್ನ ಕೈ ಸುಟ್ಟುಕೊಂಡಿತು. ಈ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ನಿರೀಕ್ಷಿತ ಪ್ರದರ್ಶನ ಕಾಣಲಿಲ್ಲ.

ಇದೀಗ ಈ ಸಿನಿಮಾ ನಿರ್ಮಾಣ ಸಂಸ್ಥೆ ಬಿದ್ದ ಸ್ಥಳದಿಂದಲೇ ಎದ್ದು ನಿಲ್ಲಲು ದೊಡ್ಡ ಸಾಹಸಕ್ಕೆ ಕೈಹಾಕಿದೆ. ಕಂಗುವಾ ಚಿತ್ರದ ವಿತರಣಾ ಹಕ್ಕುಗಳನ್ನು ಪಡೆದ ನಂತರ, ಒಂದು ರಿಸ್ಕ್ ತೆಗೆದುಕೊಂಡು ತಮಿಳಿನಲ್ಲಿ ಚಿತ್ರ ನಿರ್ಮಾಣಕ್ಕೆ ಕೈಹಾಕಿದೆ. ಇಳಯದಳಪತಿ ವಿಜಯ್ ನಟನೆಯ ಜನ ನಾಯಗನ್ ಚಿತ್ರವನ್ನು ಕೆವಿಎನ್​ ಸಂಸ್ಥೆ ನಿರ್ಮಿಸುತ್ತಿದೆ.

ಅಂದಹಾಗೆ ಜನ ನಾಯಗನ್​, ವಿಜಯ್ ಅವರ ಕೊನೆಯ ಚಿತ್ರ. ಇತ್ತೀಚೆಗೆ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಯಿತು. ತಮಿಳಿನಲ್ಲಿ ವಿಜಯ್ ಅವರ ಜನ ನಾಯಗನ್ ಚಿತ್ರ ಮಾತ್ರವಲ್ಲದೆ, ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಬಜೆಟ್ ಚಿತ್ರಗಳನ್ನೂ ಸಹ ಕೆವಿಎನ್​ ಸಂಸ್ಥೆ ನಿರ್ಮಿಸುತ್ತಿದೆ. ಧ್ರುವ ಸರ್ಜಾ ಅವರೊಂದಿಗೆ ಕೆಡಿ ಮತ್ತು ಯಶ್ ಅವರೊಂದಿಗೆ ಟಾಕ್ಸಿಕ್ ಚಿತ್ರಗಳನ್ನು ನಿರ್ಮಿಸುತ್ತಿದೆ.

ಈ ಮೂರೂ ಚಿತ್ರಗಳು ಪ್ಯಾನ್-ಇಂಡಿಯನ್ ಮಾರುಕಟ್ಟೆಯನ್ನು ಆಳಲು ಬರುತ್ತಿವೆ. ಆದರೆ, ವಿಜಯ್ ಅವರು ಯಶ್ ಮತ್ತು ಧ್ರುವರಿಗಿಂತ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವುದರಿಂದ, ಕೆವಿಎನ್​ ನಿರ್ಮಾಣ ಕಂಪನಿಯು ಈ ಚಿತ್ರದ ಮೇಲೆ ತನ್ನ ಭರವಸೆಯನ್ನು ಇರಿಸಿದೆ. ವಿಜಯ್ ಕ್ರೇಜ್‌ಗೆ ಸರಿಹೊಂದುವಂತೆ ಚಿತ್ರವನ್ನು ನಿರ್ಮಿಸಲಾಗುತ್ತಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net