

ಬೆಂಗಳೂರು: ತೆಲುಗಿನ ಹಲವಾರು ಚಲನಚಿತ್ರಗಳಿಗೆ ಕೆಲಸ ಮಾಡಿದ ಅನುಭವವಿರುವವರು ಸದ್ದಿಲ್ಲದೆ ಕನ್ನಡದಲ್ಲೊಂದು ಚಿತ್ರ ಮಾಡಿ ಮುಗಿಸಿದ್ದಾರೆ. ಅದೇ 'ಕುಂತಿ ಪುತ್ರ'. ಈ ಚಿತ್ರ ಕನ್ನಡವಷ್ಟೇ ಅಲ್ಲದೆ, ತೆಲುಗಿಗೂ ಡಬ್ ಆಗಿ ಬಿಡುಗಡೆಯಾಗುತ್ತಿದೆ.
ಗುಲ್ಬರ್ಗ ಭಾಗದಲ್ಲಿ, 90ರ ದಶಕದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಹಳ್ಳಿ ಸೊಗಡಿನ ಹಿನ್ನೆಲೆಯಲ್ಲಿ ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ರಾಜು ಬೋನಗಾಣಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದರೆ, ಶಶಾಂಕ್ ಗೌಡ ಮತ್ತು ದೇವೇಂದ್ರಗೌಡ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.
ತಾನಾಯಿತು ತನ್ನ ಕೆಲಸವಾಯಿತು ಎಂದುಕೊಂಡಿದ್ದ ವ್ಯಕ್ತಿಯ ಬದುಕಲ್ಲಿ ನಡೆಯುವ ಘಟನೆಗಳಿಂದ ಜನ ಆತನನ್ನು ತಪ್ಪಾಗಿ ತಿಳಿದುಕೊಂಡಿರುತ್ತಾರೆ, ಆತನ ಜೀವನದಲ್ಲಿ ನಾಯಕಿಯ ಪ್ರವೇಶವಾದ ನಂತರ ಮುಂದೇನಾಗಲಿದೆ ಎನ್ನುವುದು ಚಿತ್ರದ ಕಥೆಯಂತೆ.
ಈ ಚಿತ್ರದಲ್ಲಿ ಗೋಪಿಕೃಷ್ಣ ನಾಯಕನಾಗಿ ನಟಿಸಿದ್ದಾರೆ. ಚಿತ್ರದ ಕುರಿತು ಮಾತನಾಡುವ ಅವರು, 'ಹಳ್ಳಿ ಸೊಗಡಿನ ಕಥೆಯಲ್ಲಿ ಸ್ನೇಹ-ಪ್ರೀತಿ ಸೇರಿದಂತೆ ಎಲ್ಲವೂ ಚಿತ್ರದಲ್ಲಿ ಅಡಕವಾಗಿದೆ. ಪಾಂಡವಪುರ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ನೈಜತೆಗೆ ಹೆಚ್ಚು ಒತ್ತು ನೀಡಲಾಗಿದೆ. ಇದುವರೆಗೂ ಮೂರು ಚಿತ್ರಗಳಲ್ಲಿ ನಟಿಸಿದ್ದು, ಅದರಲ್ಲಿ ಒಂದು ಚಿತ್ರ ಬಿಡುಗಡೆಯಾಗಿದೆ' ಎಂದು ಹೇಳಿದರು.
ಇದನ್ನೂ ಓದಿ: ನಿರ್ಮಾಪಕರ ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರಿಹಾರ …
ಚಿತ್ರದಲ್ಲಿ ಪ್ರಿಯಾಂಕಾ ಚೌಧರಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಆರತಿ ರಾಜ್. ವಿಜಯಪ್ರಕಾಶ್ ಸೇರಿದಂತೆ ಹಲವು ಮಂದಿ ನಟಿಸಿದ್ದಾರೆ. ದಿಲೀಪ್ ಭಂಡಾರಿ ಅವರ ಸಂಗೀತ ಮತ್ತು ಈಶ್ವರ್ ಅವರ ಕ್ಯಾಮೆರಾ ಕೆಲಸ ಈ ಚಿತ್ರಕ್ಕಿದೆ.