

‘ಅಖಂಡ’ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಹಬ್ಬದೂಟ ಹಾಕಿಸಿದ್ದ 61ರ ಪ್ರಾಯದ ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ, ಮತ್ತೆ ಸಿನಿಮಾ ಕೆಲಸಕ್ಕೆ ಮರಳಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಅವರ ಹೊಸ ಚಿತ್ರದ ಫಸ್ಟ್ ಲುಕ್ ಅಭಿಮಾನಿ ವಲಯದಲ್ಲಿ ಅಷ್ಟೇ ಕುತೂಹಲ ಮೂಡಿಸಿತ್ತು. ಇದೀಗ ಆ ಸಿನಿಮಾದ ಅವಕಾಶವನ್ನು ಕೈಚೆಲ್ಲಿದ್ದಾರಂತೆ 18ರ ಆಸುಪಾಸಿನ ನಟಿ ಕೃತಿ ಶೆಟ್ಟಿ.
ಟಾಲಿವುಡ್ನಲ್ಲಿ ಮಂಗಳೂರು ಮೂಲದ ನಟಿ ಕೃತಿ ಶೆಟ್ಟಿ ಸದ್ಯ ಮುಂಚೂಣಿಯಲ್ಲಿದ್ದಾರೆ. ಸ್ಟಾರ್ ನಟರ ಹಲವು ಸಿನಿಮಾಗಳಲ್ಲಿ ನಟಿಸುವುದರ ಜತೆಗೆ ಹೊಸ ಚಿತ್ರಗಳ ಅವಕಾಶಗಳನ್ನೂ ಅವರು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಬಾಲಯ್ಯ ಅಭಿನಯದ ಹೊಸ ಚಿತ್ರದಲ್ಲಿ ನಟಿಸಲು ಕೃತಿ ನಿರಾಕರಿಸಿದ್ದಾರೆ. ಅದಕ್ಕೆ ಕಾರಣ ವಯಸ್ಸಿನ ಅಂತರ!
ಗೋಪಿಚಂದ್ ಮಲಿನೇನಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ಬಾಲಣ್ಣನಿಗೆ ಜೋಡಿಯಾಗಿ ಕೃತಿಯನ್ನು ಕರೆತರಬೇಕೆಂದು ತಂಡ ನಿರ್ಧರಿಸಿತ್ತು. ಆದರೆ, ಆ ದೊಡ್ಡ ಆಫರ್ ಅವರಿಗೆ ಬೇಡವಂತೆ. ‘ನನ್ನ ಸಿನಿಮಾ ವೃತ್ತಿ ಜೀವನ ಈಗತಾನೇ ಶುರುವಾಗಿದೆ. ಈಗಲೇ ನಾನು ಹಿರಿಯ ನಟರ ಜತೆ ನಟಿಸುವುದಿಲ್ಲ’ ಎಂಬ ಪ್ರತಿಕ್ರಿಯೆ ಅವರಿಂದ ಬಂದಿದೆಯಂತೆ. ಇದೆಲ್ಲವನ್ನು ಅರಿತ ತಂಡ ಕೃತಿಯನ್ನು ಕೈಬಿಟ್ಟು ಶ್ರುತಿ ಹಾಸನ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಇದೇ ಚಿತ್ರದಲ್ಲಿ ಕನ್ನಡದ ನಟ ‘ದುನಿಯಾ’ ವಿಜಯ್ ಸಹ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. -ಏಜೆನ್ಸೀಸ್