ಕೃತಿಗೆ ಪಾಸಿಟಿವ್ ... ಬಾಲಿವುಡ್‌ನಲ್ಲಿ ಹೆಚ್ಚಾಯ್ತು ಸೋಂಕಿತರ ಸಂಖ್ಯೆ

Kriti Sanon - Final
Published on

ಮುಂಬೈ: ಲಾಕ್‌ಡೌನ್ ಯಾವಾಗ ಮುಗಿಯುತ್ತದೋ ಮತ್ತು ಯಾವಾಗ ಬಣ್ಣ ಹಚ್ಚುತ್ತೀನೋ ಎಂದು ತುದಿಗಾಲಲ್ಲಿ ನಿಂತು ಕಾಯುತ್ತಿದ್ದವರ ಪೈಕಿ ಬಾಲಿವುಡ್ ನಟಿ ಕೃತಿ ಸನೋನ್ ಸಹ ಒಬ್ಬರು. ಈಗ ಅವರು ಕರೊನಾದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಾಕ್‌ಡೌನ್ ಸಡಿಲಗೊಂಡು, ಚಿತ್ರೀಕರಣ ಚಟುವಟಿಕೆಗಳು ಶುರುವಾಗುತ್ತಿದ್ದಂತೆಯೇ, ರಾಜಕುಮಾರ್ ರಾವ್ ಅಭಿನಯದ ಚಿತ್ರದಲ್ಲಿ ನಟಿಸುವುದಕ್ಕೆ ಕೃತಿ ಚಂಡೀಗಢಕ್ಕೆ ಹೋಗಿದ್ದರು. ಒಂದು ಹಂತದ ಚಿತ್ರೀಕರಣ ಮುಗಿಸಿ ಅಲ್ಲಿಂದ ವಾಪಸ್ಸಾಗಿರುವ ಅವರಿಗೆ ಕೋವಿಡ್ ಪಾಸಿಟಿವ್ ಎಂಬ ಸುದ್ದಿಯೊಂದು ಕೇಳಿ ಬಂದಿದೆ. ಅಲ್ಲಿಗೆ ಬಾಲಿವುಡ್‌ನಲ್ಲಿ ಪ್ರತಿದಿನ ಹೆಚ್ಚುತ್ತಿರುವ ಕೋವಿಡ್ ಸೋಂಕಿತರ ಪಟ್ಟಿಗೆ ಕೃತಿ ಸಹ ಸೇರಿಕೊಂಡಿದ್ದಾರೆ.

ಎಲ್ಲಿಯವರೆಗೂ ಚಿತ್ರೀಕರಣ ಚಟುವಟಿಕೆಗಳು ಶುರುವಾಗಿರಲಿಲ್ಲವೋ, ಅಲ್ಲಿಯವರೆಗೂ ಬಾಲಿವುಡ್ ಮಂದಿ ಸುರಕ್ಷಿತವಾಗಿದ್ದರು. ಯಾವಾಗ ಕೆಲಸಗಳು ಪ್ರಾರಂಭವಾದವೋ, ಒಬ್ಬೊಬ್ಬರೇ ಸೋಂಕಿತರಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಅರ್ಜುನ್ ಕಪೂರ್, ಐಶ್ವರ್ಯಾ ರೈ, ಮಲೈಕಾ ಅರೋರಾ ಸೇರಿದಂತೆ ಹಲವರು ಕಳೆದ ಕೆಲವು ತಿಂಗಳುಗಳಲ್ಲಿ ಪರೀಕ್ಷೆ ಮಾಡಿಸಿಕೊಂಡಾಗ ಪಾಸಿಟಿವ್ ಆಗಿರುವುದಾಗಿ ದೃಢಪಟ್ಟಿದ್ದಾರೆ.

ಈಗ ಆ ಸಾಲಿಗೆ ಇನ್ನಷ್ಟು ಜನ ಸೇರಿಕೊಂಡಿದ್ದಾರೆ. ಪ್ರಮುಖವಾಗಿ ಕೃತಿಗೆ ಪಾಸಿಟಿವ್ ಎಂದು ಬಾಲಿವುಡ್‌ನಲ್ಲಿ ದೊಡ್ಡ ಸುದ್ದಿಯಾಗಿದೆ. ಆದರೆ, ಕೃತಿ ಮಾತ್ರ ಈ ವಿಷಯವಾಗಿ ಇನ್ನೂ ಸ್ಪಷ್ಟನೆ ನೀಡಿಲ್ಲ. ಮಿಕ್ಕಂತೆ ವರುಣ್ ಧವನ್, ಸನ್ನಿ ಡಿಯೋಲ್, ನೀತೂ ಸಿಂಗ್ ಸಹ ಕ್ವಾರಂಟೈನ್‌ನಲ್ಲಿದ್ದಾರೆ. ಅನಿಲ್ ಕಪೂರ್‌ಗೆ ಸಹ ಕೋವಿಡ್ ಪಾಸಿಟಿವ್ ಎಂದು ಸುದ್ದಿಯಾಗಿತ್ತು. ಆದರೆ, ವರದಿ ನೆಗೆಟಿವ್ ಬಂದಿರುವುದಾಗಿ ಅನಿಲ್ ಕಪೂರ್ ಹೇಳಿಕೊಂಡಿದ್ದಾರೆ.

ಒಟ್ಟಾರೆ, ಬಾಲಿವುಡ್‌ನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಶೂಟಿಂಗ್‌ಗೆ ಹೋದವರೆಲ್ಲಾ ಪುನಃ ವಿಶ್ರಾಂತಿಗೆಂದು ಮನೆಗೆ ಸೇರುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net