

ಮುಂಬೈ: ಕೃತಿ ಖರಬಂದ ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ನಲ್ಲಿ ನೆಲೆಗೊಂಡಿರುವುದಷ್ಟೇ ಅಲ್ಲ, ಅಲ್ಲಿ ಒಂದರಹಿಂದೊಂದು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿರುವ ಅವರು, '14 ಫೇರೆ' ಎಂಬ ಹೊಸ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದೆ.
ದೇವಾಂಶು ಸಿಂಗ್ ನಿರ್ದೇಶನದ '14 ಫೇರೆ' ಚಿತ್ರದಲ್ಲಿ ವಿಕ್ರಾಂತ್ ಮಾಸ್ಸೆ ಜತೆಗೆ ಕೃತಿ ಅಭಿನಯಿಸಬೇಕಿತ್ತು. ಇಷ್ಟರಲ್ಲಾಗಲೇ ಚಿತ್ರೀಕರಣ ಸಹ ಪ್ರಾರಂಭವಾಗಿರಬೇಕಿತ್ತು. ಆದರೆ, ಕೃತಿ ಹಾಸಿಗೆ ಹಿಡಿದಿರುವುದರಿಂದ, ಚಿತ್ರೀಕರಣವನ್ನು ಮುಂದೂಡಲಾಗಿದೆ.
ಇಷ್ಟಕ್ಕೂ ಕೃತಿಗೆ ಏನಾಗಿದೆ ಎಂದರೆ, ಮಲೇರಿಯಾ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ತಮಗೆ ಮಲೇರಿಯಾ ಆಗಿದೆ ಎಂದು ತಮ್ಮ ಹೊಸ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
'ಇದು ನನ್ನ ಮಲೇರಿಯಾವಾಲಾ ಮುಖ. ನನ್ನ ಬಗ್ಗೆ ಚಿಂತಿಸುತ್ತಿರುವ ಎಲ್ಲರಿಗೂ ತಿಳಿಸಲು ಬಯಸುವುದೇನೆಂದರೆ, ದಿನದಿಂದ ದಿನಕ್ಕೆ ನಾನು ಸುಧಾರಿಸುತ್ತಿದ್ದೇನೆ ಮತ್ತು ಆದಷ್ಟು ಬೇಗ ಗುಣಮುಖಳಾಗುತ್ತೇನೆ ಎಂಬ ವಿಶ್ವಾಸದಲ್ಲಿದ್ದೇನೆ. ಈ ವರ್ಷ ನನಗೆ ಸಾಕಷ್ಟು ತಾಳ್ಮೆ ಮತ್ತು ನನ್ನ ಬಗ್ಗೆ ನಾನು ಹೆಚ್ಚು ಗಮನಹರಿಸಬೇಕು ಮತ್ತು ನನ್ನನ್ನು ನಾನು ಪ್ರೀತಿಸಬೇಕು ಎಂದು ತೋರಿಸಿಕೊಟ್ಟಿದೆ. ಸದ್ಯದಲ್ಲೇ ಹುಷಾರಾಗಿ, ಆದಷ್ಟು ಬೇಗ ಕೆಲಸಕ್ಕೆ ವಾಪಸ್ಸಾಗುವುದಕ್ಕೆ ಕಾಯುತ್ತಿದ್ದೇನೆ' ಎಂದು ಕೃತಿ ಬರೆದುಕೊಂಡಿದ್ದಾರೆ.